ಕಾಂಕ್ರೀಟ್ ಅಲ್ಲಲ್ಲ, ಉಪ್ಪಿಟ್ಟು ಪುರಾಣ...
"ಕಾಂಕ್ರೀಟ್" ಎಂದೇ ಖ್ಯಾತಿ ಪಡೆದಿರುವ ಉಪ್ಪಿಟ್ಟಿನ ಅಭಿಮಾನಿಗಳ ಸಂಖ್ಯೆ ತೀರಾ ಕಡಿಮೆಯೇ. ಆಪತ್ತಿಗೆ ಒದಗುವ ಆಪ್ತರಕ್ಷಕನಾದರೂ, ಇದನ್ನು ಇಷ್ಟಪಟ್ಟು ತಿನ್ನುವವರು ವಿರಳ. ಹಾಗಂತ ಇದನ್ನು ಮೂಲೆಗುಂಪು ಮಾಡುವ ಹಾಗಿಲ್ಲ. ಇದಕ್ಕೆ ಅಭಿಮಾನಿ ಬಳಗವೂ ಇದೆ. ಆದರೆ ಅವರಿಗೆ ಸಮಾಜದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇಲ್ಲ.
ಉಪ್ಪಿಟ್ಟು ಎಂದರೆ ಮೂಗು ಮುರಿಯುವವರೇ ಹೆಚ್ಚು. ಉಪ್ಪಿಟ್ಟನ್ನು ಪ್ರಿಯವಾಗಿಸಲು ಅಮ್ಮ ಮತ್ತು ಮಾರ್ಕೆಟ್ ತಜ್ಞರು ವೈವಿಧ್ಯಮಯ ಉಪ್ಪಿಟ್ಟನ್ನು ಈವರೆಗೂ ಪ್ರಯೋಗ ಮಾಡಿದ್ದಾರೆ. ಆದರೆ ಅದ್ಯಾವುದೂ ಅಂದಷ್ಟು ಯಶ ಕಂಡಿಲ್ಲ.
ಬಾಲ್ಯದಿಂದ ಆರಂಭಿಸಿ ಹಾಸಿಗೆ ಹಿಡಿಯುವವರೆಗೂ ನಾವೆಲ್ಲ ಒಂದಲ್ಲಾ ಒಂದು ಬಾರಿ ಉಪ್ಪಿಟ್ಟು ತಿಂದವರೇ. ಅದು ಇಷ್ಟದಿಂದಲೋ, ಕಷ್ಟದಿಂದಲೋ ಎಂಬುದು ಪ್ರಶ್ನೆಯಲ್ಲ.
ಅಮ್ಮನಿಗೆ ಉದಾಸೀನವಾದಾಗ ಮಾಡುವ ತಿಂಡಿ ಇದು. ಹತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ನೆಂಟರು ಮನೆಗೆ ದಾಂಗುಡಿ ಇಟ್ಟಾಗ ಥಟ್ಟನೆ ನೆನಪಾಗುವ ತಿಂಡಿಯಿದು. ಮದುವೆ ಮುಂತಾದ ಶುಭ ಮತ್ತು ಅಶುಭ ಸಮಾರಂಭದಲ್ಲಿ ಬೆಳಗ್ಗಿನ ತಿಂಡಿ ಮೆನುವಿನಲ್ಲಿ ಮೊದಲ ಸ್ಥಾನ ಉಪ್ಪಿಟ್ಟಿಗೆ. ಇನ್ನೂ ಮದುವೆಯಾಗದೆ ಉಳಿದುಕೊಂಡ ಬ್ಯಾಚುಲರ್ ಸಂಘದ ಪ್ರತಿಯೊಬ್ಬರೂ ಕಲಿಯುವ ಮೊದಲ ತಿಂಡಿ ಈ ಉಪ್ಪಿಟ್ಟು. ಹಾಗೆ ಬ್ರಹ್ಮಚಾರಿ ಹುಡುಗರು, ಹುಡುಗಿ ನೋಡಲು ಹೋದಾಗ ಟೇಬಲ್ ಮೇಲೆ ಮೊದಲು ಏರಿ ಕುಳಿತಿರುವ ತಿಂಡಿ ಕೂಡಾ ಉಪ್ಪಿಟ್ಟು! ಗಂಡು ಒಪ್ಪಲಿ, ಬಿಡಲಿ ನಾವು ಮಾಡೋದು ಉಪ್ಪಿಟ್ಟೇ ಎನ್ನುತ್ತಾರೆ ಹೆಣ್ಣಿನ ಕಡೆಯವರು, ಕಾರಣ ತಯಾರಿಸಲು ಸುಲಭ.
![]() |
| ನಮ್ಮನೆಯ ಉಪ್ಪಿಟ್ಟು Captured by VarshaClicks |
ನೋಡಿ, ಉಪ್ಪಿಟ್ಟಿಗೆ ಇಷ್ಟೆಲ್ಲಾ ಮಹತ್ವವಿದೆ. ಬೇಗನೆ ತಯಾರಿಸಬಹುದಾದ ತಿಂಡಿ ಜೊತೆಗೆ ಇದರಲ್ಲಿ ಬಗೆಬಗೆಯ ವೈವಿಧ್ಯಗಳೂ ಉಂಟು! ಉದಾಹರಣೆಗೆ ಅವರೆಕಾಳು ಉಪ್ಪಿಟ್ಟು, ಶಾವಿಗೆ ಉಪ್ಪಿಟ್ಟು, ರವೆ ಉಪ್ಪಿಟ್ಟು, ತರಕಾರಿ ಉಪ್ಪಿಟ್ಟು (ಉರುಫ್ ಚೌಚೌ ಬಾತ್) ಹೀಗೆ ಇನ್ನೂ ನಾಲ್ಕು ಹೆಸರು ಸೇರಿಸುವಷ್ಟು ಬಗೆಯ ಉಪ್ಪಿಟ್ಟುಗಳಿವೆ. ನವಣೆ ಉಪ್ಪಿಟ್ಟು ಈ ಗುಂಪಿಗೆ ಹೊಸ ಸೇರ್ಪಡೆ.
ಇದನ್ನೂ ಓದಿ : ಇದು ಗಡ್ ಬಡ್ ಕಥೆ!
ಆದರೂ ಉಪ್ಪಿಟ್ಟು ಬೇಗನೆ ಬೋರ್ ಹೊಡೆಸುವ ತಿಂಡಿ. ಉಪ್ಪಿಟ್ಟಿನ ಜೊತೆ ಅವಲಕ್ಕಿ ಅಥವಾ ಶೀರ (ಒಂದು ಬಗೆಯ ಸಿಹಿತಿಂಡಿ) ಜೊತೆಗಿದ್ದರೆ ರುಚಿ ಇಮ್ಮಡಿಯಾಗುತ್ತದೆ. ಉಪ್ಪಿಟ್ಟು ಕೂಡಾ ಕೆಲವೊಮ್ಮೆ ಪ್ರಿಯವಾಗುವುದು ಇದೇ ಕಾರಣಕ್ಕೆ.
ಭಾರತದಲ್ಲಿ ನಾನಾ ಬಗೆಯ ಖಾದ್ಯಗಳು ಚಾಲ್ತಿಯಲ್ಲಿವೆ. ಕೆಲವು ಮೂಲೆಗುಂಪು ಆಗಬಹುದು. ಕೆಲವನ್ನು ನಾವು ಮರೆತುಬಿಡಬಹುದು. ಮತ್ತೆ ಕೆಲವು ಇದ್ದರೂ ಇಲ್ಲದಂತಹ ಸ್ಥಿತಿಯಲ್ಲಿ ಇರಬಹುದು. ಆದರೆ ಉಪ್ಪಿಟ್ಟು, ಇದೆಲ್ಲವನ್ನೂ ಮೀರಿದ್ದು. ಒಂದಲ್ಲಾ ಒಂದು ಬಗೆಯಲ್ಲಿ ಇದು ನಿಮ್ಮ ಜೀವನವನ್ನು ಪ್ರವೇಶಿಸುತ್ತದೆ. ಆಗ ಕಣ್ಣು ಮುಚ್ಚಿ, ಮನಸು ಗಟ್ಟಿ ಮಾಡಿಕೊಂಡು ತಿನ್ನುವುದು ಮಾತ್ರವೇ ನಮಗಿರುವ ಆಯ್ಕೆ...
ಭಾರತದಲ್ಲಿ ನಾನಾ ಬಗೆಯ ಖಾದ್ಯಗಳು ಚಾಲ್ತಿಯಲ್ಲಿವೆ. ಕೆಲವು ಮೂಲೆಗುಂಪು ಆಗಬಹುದು. ಕೆಲವನ್ನು ನಾವು ಮರೆತುಬಿಡಬಹುದು. ಮತ್ತೆ ಕೆಲವು ಇದ್ದರೂ ಇಲ್ಲದಂತಹ ಸ್ಥಿತಿಯಲ್ಲಿ ಇರಬಹುದು. ಆದರೆ ಉಪ್ಪಿಟ್ಟು, ಇದೆಲ್ಲವನ್ನೂ ಮೀರಿದ್ದು. ಒಂದಲ್ಲಾ ಒಂದು ಬಗೆಯಲ್ಲಿ ಇದು ನಿಮ್ಮ ಜೀವನವನ್ನು ಪ್ರವೇಶಿಸುತ್ತದೆ. ಆಗ ಕಣ್ಣು ಮುಚ್ಚಿ, ಮನಸು ಗಟ್ಟಿ ಮಾಡಿಕೊಂಡು ತಿನ್ನುವುದು ಮಾತ್ರವೇ ನಮಗಿರುವ ಆಯ್ಕೆ...
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

