ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೮
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇದನ್ನೂ ಓದಿ :
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಸಂಚಿಕೆ ೮
ತಂಪುಹೊತ್ತಿನಲ್ಲಿ ನೆನೆ : ಬಹಳ ಕೃತಜ್ಞತೆಯನ್ನು ತೋರಿಸು
ತಣ್ಣೀರೆರಚು : ಉತ್ಸಾಹಭಂಗಮಾಡು
ತನ್ನ ಕಾಲ ಮೇಲೆ ತಾನು ನಿಲ್ಲು : ಸ್ವಾವಲಂಬಿಯಾಗು
ತಲೆ ಎತ್ತಿ ತಿರುಗು : ಮರ್ಯಾದೆಯಿಂದ ಬದುಕು
ತಲೆ ಓಡದಿರು : ಏನೂ ತೋಚದಿರು
ತಲೆ ಕೆರೆ : ಚಿಂತಿಸು
ತಲೆ ಕೊಡು : ಭಾರವಹಿಸಿಕೊಳ್ಳು
ತಲೆಗೆ ಕಟ್ಟು : ಒತ್ತಾಯದಿಂದ ಹೇರು, ಜವಾಬ್ದಾರಿ ಹೊರಿಸು
ತಲೆಗೆ ತರು : ತೊಂದರೆಗೆ ಸಿಕ್ಕಿಸು
ತಲೆಗೆ ಹಚ್ಚಿಕೊಳ್ಳು : ಬಹಳವಾಗಿ ಚಿಂತಿಸು
ತಲೆಗೆ ಹತ್ತು : ಅರ್ಥವಾಗು
ತಲೆ ತಪ್ಪಿಸು : ಜಾರಿಕೊಳ್ಳು, ಕೈಗೆ ಸಿಗದಿರು
ತಲೆತಾಕು : ಕಷ್ಟಬರು, ಅನುಭವಕ್ಕೆ ಬರು
ತಲೆ ತಿನ್ನು : ಕಾಡು, ಕಾಡಿಸು
ತಲೆ ತಿರುಗು : ಬುದ್ಧಿ ಬದಲಾಗು, ಅಹಂಕಾರವುಂಟಾಗು
ತಲೆ ತೊಳೆದುಕೊಳ್ಳು : ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊಳ್ಳು
ತಲೆದೂಗು : ಮೆಚ್ಚುಗೆ ಸೂಚಿಸು
ತಲೆ ಬಿದ್ದುಹೋಗು : ತುಂಬ ಶ್ರಮವಾಗು, ಸಾಯು
ತಲೆ ಬಿಸಿಯಾಗು : ಕೋಪ, ಕೆಲಸ ಮುಂತಾದವುಗಳಿಂದ ಮೆದುಳಿಗೆ ಹೆಚ್ಚು ಶ್ರಮವಾಗು, ಕಾತುರಕ್ಕೊಳಗಾಗು
ತಲೆ ಬೋಳಿಸು : ನಷ್ಟವಾಗು
ತಲೆಭಾರ : ದೊಡ್ಡ ಹೊಣೆಗಾರಿಕೆ
ತಲೆ ಮಾಸಿದವ : ದುರದೃಷ್ಟವಂತ, ಅನನುಭವಿ
ತಲೆಯ ಮೇಲೆ ಕಲ್ಲುಹಾಕು : ನಾಶಮಾಡು, ತೊಂದರೆಯುಂಟುಮಾಡು
ತಲೆಯ ಮೇಲೆ ಕೂರಿಸಿಕೊಳ್ಳು : ಅತಿ ಮುದ್ದುಮಾಡು, ತುಂಬ ಸಲಿಗೆ ಕೊಡು
ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳು : ಏನೂ ತೋಚದಂತಾಗು, ಚಿಂತಿತನಾಗು
ತಲೆಯ ಮೇಲೆ ಚಪ್ಪಡಿ ಎಳೆ : ನಾಶಮಾಡು, ತೊಂದರೆಯುಂಟುಮಾಡು
ತಲೆಯ ಮೇಲೆ ಮೆಣಸು ಅರೆ : ಪೀಡಿಸು
ತಲೆಯ ಮೇಲೆ ಹಾಕು : ಹೊಣೆ ಹೊರಿಸು
ತಲೆಯ ಮೇಲೆ ಹೊಡೆಯುವ ಹಾಗಿರು : ಮೀರಿಸುವ ಹಾಗಿರು, ಮೇಲಾಗಿರು
ತಲೆಯಲ್ಲಾಡಿಸು : ಸಮ್ಮತಿ/ಅಸಮ್ಮತಿ ಸೂಚಿಸು
ತಲೆಯಿಲ್ಲ : ಬುದ್ಧಿಯಿಲ್ಲ
ತಲೆಯುಳಿಸಿಕೊಳ್ಳು : ಅಪಾಯದಿಂದ ಪಾರಾಗು
ತಲೆಯೆತ್ತದಂತೆ ಮಾಡು : ಅಪಮಾನ ಮಾಡು, ಚೇತರಿಸಿಕೊಳ್ಳದಂತೆ ಮಾಡು
ತಲೆಯೆತ್ತು : ಮೇಲಕ್ಕೆ ಬರು, ಕಾಣಿಸಿಕೊಳ್ಳು, ಅಭಿವೃದ್ಧಿ ಹೊಂದು
ತಲೆಯೊಡ್ಡು : ವಹಿಸಿಕೊಳ್ಳು, ಜವಾಬ್ದಾರಿ ಹೊರು
ತಲೆ ಹಾಕು : ಮಧ್ಯೆ ಪ್ರವೇಶಿಸು
ತಲೆ ಹೋಗು : ಅಪಾಯವುಂಟಾಗು, ಸಾಯು
ತಾಳಕ್ಕೆ ಸರಿಯಾಗಿ ಹೆಜ್ಜೆಹಾಕು : ಹೇಳಿದಂತೆ ಕೇಳು
ತಾಳಮೇಳವಿಲ್ಲದಿರು : ಹೊಂದಾಣಿಕೆಯಿಲ್ಲದಿರು
ತಾಳಹಾಕು : ಅನುಸರಿಸು, ಹೇಳಿದಂತೆ ಕೇಳು
ತಿಂದು ತೇಗು : ಬರಿದು ಮಾಡು
ತಿಪ್ಪರಲಾಗ ಹಾಕು : ಶಕ್ತಿಮೀರಿ ಯತ್ನಿಸು
ತಿಪ್ಪೆಸಾರಿಸು : ದೋಷವನ್ನು ಮುಚ್ಚಿಟ್ಟು ಮೇಲುನೋಟಕ್ಕೆ ಶುದ್ಧವಾಗಿರುವಂತೆ ತೋರಿಸು
ತಿರುಕನ ಕನಸು : ನನಸಾಗದ ಇಚ್ಛೆ
ತಿರುಗಿ ಬೀಳು : ವಿರೋಧಿಸು
ತಿರುಮಂತ್ರ ತಿದ್ದು : ಕಲಿತದ್ದನ್ನು ಹೇಳಿಕೊಟ್ಟವನಿಗೇ ತಿರುಗಿಸು
ತಿಲಾಂಜಲಿ ಬಿಡು : ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳು, ಕೈ ಬಿಡು
ತಿಲೋದಕ ಬಿಡು : ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳು, ಕೈ ಬಿಡು
ತುಂಬಿದ ಕೊಡ : ನಿಜವಾದ ಯೋಗ್ಯತೆಯಿದ್ದು ಜಂಬವಿಲ್ಲದವ
ತುಟಿಪಿಟುಕ್ಕೆನ್ನದಿರು : ಸ್ವಲ್ಪವೂ ಮಾತಾಡದಿರು
ತುಟಿ ಬಿಚ್ಚು : ಮಾತಾಡು
ತುದಿಗಾಲ ಮೇಲೆ ನಿಲ್ಲು : ಅವಸರಪಡು
ತೇಲುಗಣ್ಣು ಮೇಲುಗಣ್ಣು ಆಗು : ಬಹಳ ಕಷ್ಟವಾಗು
ತೊಡೆ ತಟ್ಟಿ ನಿಲ್ಲು : ಜಗಳಕ್ಕೆ ನಿಲ್ಲು
ತೋಡಿಕೊಳ್ಳು : ಮನಸಾರ ಹೇಳಿಕೊಳ್ಳು
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.
