ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೧
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಸಂಚಿಕೆ ೧
ಅಂಗೈನೆಲ್ಲಿ : ಚೆನ್ನಾಗಿ ತಿಳಿದಿರುವುದು
ಅಂಗೈಯಲ್ಲಿ ಜೀವ ಹಿಡಿದುಕೋ : ಬಹಳ ಭಯ ಮತ್ತು ಎಚ್ಚರಿಕೆಯಿಂದಿರುವುದು
ಅಂತರ್ಲಾಗ ಹಾಕು : ಬಹಳ ಪ್ರಯತ್ನಮಾಡು
ಅಗ್ರತಾಂಬೂಲ : ಮೊದಲ ಮರ್ಯಾದೆ
ಅಗ್ರಪೀಠ : ಮುಖ್ಯ ಸ್ಥಾನ, ಮೊದಲ ಮರ್ಯಾದೆ
ಅಗ್ರವೀಳ್ಯ : ಮೊದಲ ಮರ್ಯಾದೆ
ಅಜ್ಜನ ಕಾಲದ್ದು : ಬಹಳ ಹಳೆಯದು
ಅಜ್ಜಿಕತೆ : ಕಟ್ಟುಕತೆ
ಅಟ್ಟಕ್ಕೇರಿಸು : ಹೊಗಳಿ ಉಬ್ಬಿಸು
ಅಡಕೆಲೆ ಕೊಡು : ಬೀಳ್ಕೊಡು
ಅಡ್ಡದಾರಿ ಹಿಡಿ : ಕೆಟ್ಟಚಾಳಿಯಲ್ಲಿ ತೊಡಗು
ಅನ್ನ ಕಿತ್ತುಕೋ : ಜೀವನಮಾರ್ಗವನ್ನು ಕೆಡಿಸು
ಅನ್ನಕ್ಕೆ ಕಲ್ಲುಹಾಕು : ಜೀವನಮಾರ್ಗವನ್ನು ಕೆಡಿಸು
ಅನ್ನದ ದಾರಿ : ಬದುಕುವ ಮಾರ್ಗ
ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ : ಬಹಳ ಅಪರೂಪವಾಗಿ
ಅರೆದು ಕುಡಿಸು : ಚೆನ್ನಾಗಿ ತಿಳಿಯುವಂತೆ ಹೇಳಿಕೊಡು
ಅರ್ಧಚಂದ್ರ ಪ್ರಯೋಗಮಾಡು : ಕತ್ತು ಹಿಡಿದು ನೂಕು
ಅವತಾರ ಮುಗಿ : ಶಕ್ತಿ, ಪ್ರಭಾವ ಮುಂತಾದವು ತಗ್ಗಿ ಹೋಗುವುದು
ಅಳಲೆಕಾಯಿ ಪಂಡಿತ : ನಕಲಿ ವೈದ್ಯ
ಅಳಿಲುಸೇವೆ : ನಿಷ್ಠೆಯಿಂದ ಮಾಡುವ ಅಲ್ಪಸೇವೆ
ಅಳೆದು ಸುರಿದು : ಹಿಂದೆಮುಂದೆ ಯೋಚಿಸಿ
ಆಕಾಶಕ್ಕೆ ಏಣಿ ಇಡು : ಅಸಾಧ್ಯವಾದ ಕೆಲಸಕ್ಕೆ ಕೈಹಾಕು
ಆಕಾಶಕ್ಕೆ ಹಾರು : ಅತ್ಯಾನಂದಪಡು
ಆಕಾಶಕ್ಕೇರು : ಅತ್ಯಾನಂದ ಪಡು, ಜಂಬ ಮಾಡು
ಆಕಾಶದಿಂದ ಇಳಿದು ಬಂದ : ದೊಡ್ಡಗುಣಗಳಿಂದ ಕೂಡಿದ
ಆಟ ನಡೆಸು : ಪ್ರಭಾವ ಬೀರು
ಆಹುತಿಯಾಗು : ಬಲಿಯಾಗು, ನಾಶಹೊಂದು
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.
