ನಿಸರ್ಗದ ನೈಸರ್ಗಿಕ ಆರಾಧನೆ 'ಚೂಡಿ ಪೂಜೆ'
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತ್ಯಧಿಕ ಮಹತ್ವವಿದೆ. ಹಬ್ಬಗಳು ಸಾಲಾಗಿ ಬರುವ, ಪ್ರಕೃತಿಯು ಮೈದುಂಬಿ ನಲಿಯುವ ತಿಂಗಳಿದು. ಮಳೆ ಭರೋ ಎಂದು ಸುರಿದು, ನೀರಿನ ಸೆಲೆಗಳು ಹುಚ್ಚೆದ್ದು ಹರಿದು, ನಿಸರ್ಗವು ತನ್ನ ಸೌಂದರ್ಯವನ್ನು ಪೂರ್ಣ ಪ್ರಮಾಣದಲ್ಲಿ ಪ್ರದರ್ಶಿಸುವ ಕಾಲವಿದು.
ಶ್ರಾವಣ ಮಾಸದ ಮಹತ್ವ
ಶ್ರಾವಣ ಮಾಸವನ್ನು ಅತ್ಯಂತ ಮಂಗಳಕರ ಮಾಸವೆಂದು ಪರಿಗಣಿಸಲಾಗುತ್ತದೆ. ಶಿವನ ಆರಾಧನೆಗೆ ಇದು ಮಹತ್ವದ ಕಾಲ. ಪೂಜೆ, ಉಪವಾಸ, ಹಬ್ಬಗಳ ಆಚರಣೆಯ ಪುಣ್ಯ ಕಾಲವಿದು.
ಪ್ರಕೃತಿಯ ಆರಾಧನೆ
ಮಾನವ ಎಷ್ಟೇ ಬಲಶಾಲಿ, ಬುದ್ಧಿವಂತನಾದರೂ ಪ್ರಕೃತಿಗೆ ಎದುರಾಗಿ, ಸರಿಸಮನಾಗಿ ನಿಲ್ಲಲಾರ. ಹಾಗಾಗಿ ಅವನು ಅದನ್ನು ಆರಾಧಿಸಲು ಪ್ರಾರಂಭಿಸಿದ. ಶ್ರಾವಣ ಮಾಸವು ಪ್ರಕೃತಿಯನ್ನು ಆರಾಧಿಸಲು ಪ್ರಕೃತಿಯೇ ನೀಡಿದ ಒಂದು ಉತ್ತಮ ಅವಕಾಶ. ಈ ಬಗೆಯ ಆಚರಣೆಗಳಲ್ಲಿ ಒಂದು 'ಚೂಡಿ ಪೂಜೆ'.
ಏನಿದು 'ಚೂಡಿ ಪೂಜೆ'?
ಈ ಪೂಜೆಗಾಗಿ ಬಳಸುವ ಹೂವಿನ ಹೆಸರು 'ಚೂಡಿ ಹೂವು'. ಸೇವಂತಿಗೆ, ರಥ ಹೂವು, ಸುಗಂಧರಾಜ, ಕಣಗಿಲೆ, ರತ್ನಗಂಧಿ, ನೆಲನೆಲ್ಲಿ ಮುಂತಾಗಿ ಪ್ರಕೃತಿದತ್ತವಾಗಿ ಸಿಗುವ ಹೂವುಗಳನ್ನು ಗರಿಕೆಯ ಜೊತೆಗೆ ಸೇರಿಸಿ, ಬಾಳೆನಾರಿನಿಂದ ಭದ್ರವಾಗಿ ಕಟ್ಟಿದರೆ ಚೂಡಿ ಹೂವು ತಯಾರು. ಗೌಡ ಸಾರಸ್ವತ ಸಮುದಾಯದ ಅತೀ ಪ್ರಮುಖ ಆಚರಣೆಯಿದು. ಪ್ರಕೃತಿಯನ್ನು ಪೂಜಿಸುವ ಪ್ರಾಕೃತಿಕ ವಿಧಾನ.
ಇದರ ಜೊತೆಗೆ ಮಜ್ರಾನಂಕೂಟ್, ಆರತಿ ಎಂದು ಕೊಂಕಣಿ ಹೆಸರುಗಳಿಂದ ಕರೆಯಲ್ಪಡುವ ಎಲೆಗಳನ್ನು ಸೇರಿಸಲಾಗುತ್ತದೆ. ಇವೆಲ್ಲವೂ ಒಟ್ಟಾಗಿ ಸೇರಿದಾಗ ಹೂವಿನ ಗೊಂಚಲಾಗುತ್ತದೆ (ಫ್ಲವರ್ ಬೊಕೆ ರೀತಿ). ಸಾಂಪ್ರದಾಯಿಕವಾಗಿ ೧ ೧ ಬಗೆಯ ಹೂವು ಮತ್ತು ಎಲೆಗಳು ಇರಬೇಕೆಂಬ ನಿಯಮವಿದೆ. ಆದರೆ ಈಗ ೫ -೬ ಬಗೆಯನ್ನು ಬಳಸುತ್ತಾರೆ.
ಪೌರಾಣಿಕ ಹಿನ್ನಲೆ
ಸೀತೆಯು ವನವಾಸದಲ್ಲಿದ್ದಾಗ ಕಾಡಿನಲ್ಲಿ ದೊರೆತ ಪುಷ್ಪ, ಎಲೆಗಳನ್ನು ದೇವರಿಗೆ ಅರ್ಪಿಸಿದಳೆಂದು, ಅದೇ ಚೂಡಿ ಪೂಜೆಯ ಹಿನ್ನಲೆ ಎಂಬ ಪ್ರತೀತಿ ಇದೆ. ತನ್ನನ್ನು ಆರಾಧಿಸಲು ಕಾಡಿನ ಹೂವು, ಎಲೆಗಳನ್ನು ಸಹ ಬಳಸಬೇಕು ಎಂಬ ಭಗವಾನ್ ವಿಷ್ಣುವಿನ ಆಸೆಯಂತೆ ಈ ಆಚರಣೆ ಆರಂಭವಾಯಿತು ಎಂಬ ಕಥೆಯೂ ಇದೆ.
ಆಚರಣೆಯ ಉದ್ದೇಶ
ಗೌಡ ಸಾರಸ್ವತ ಸಮುದಾಯದ ಮುತ್ತೈದೆಯರು ಪ್ರತೀ ಶುಕ್ರವಾರ ಮತ್ತು ಭಾನುವಾರ ಈ ಪೂಜೆಗೈಯ್ಯುತ್ತಾರೆ. ಶ್ರಾವಣದ ಮೊದಲ ಶುಕ್ರವಾರ ಇದು ಆರಂಭವಾಗುತ್ತದೆ. ಕರ್ನಾಟಕ ಮತ್ತು ಕೇರಳ ಭಾಗಗಳಲ್ಲಿ ಈ ಆಚರಣೆ ಜಾರಿಯಲ್ಲಿದೆ. ಇದರ ಮುಖ್ಯ ಉದ್ದೇಶ, ತುಳಸಿ ಮತ್ತು ಸೂರ್ಯನ ಆರಾಧನೆ.
ಚೂಡಿ ಪೂಜೆಯ ಸಾಂಪ್ರದಾಯಿಕ ವಿಧಾನ
ಹರಿವಾಣದಲ್ಲಿ ಕಲಶ, ಅರಿಶಿನ ಕುಂಕುಮ ಬಟ್ಟಲು, ಅಕ್ಷತೆ, ವೀಳ್ಯದೆಲೆ, ಅಡಿಕೆ, ಊದುಬತ್ತಿ, ಆರತಿ ಜೊತೆಗೆ ನೈವೇದ್ಯ ಪ್ರಸಾದವನ್ನು ಇಟ್ಟುಕೊಂಡು ಮೊದಲು ತುಳಸಿಗೆ ಚೂಡಿಯನ್ನು ಅರ್ಪಿಸಲಾಗುತ್ತದೆ. ಕಲಶದ ನೀರನ್ನು ತುಳಸಿ ಮತ್ತು ಸೂರ್ಯನಿಗೆ ಅರ್ಘ್ಯದಂತೆ ನೀಡಿ, ನಂತರ ಕಟ್ಟೆಗೆ ಪ್ರದಕ್ಷಿಣೆ ಹಾಕುತ್ತಾ, ಸೂರ್ಯನ ಕಡೆಗೆ ನೋಡುತ್ತಾ, ಅವನಿಗೆ ಅಕ್ಷತೆಯನ್ನು ಅರ್ಪಿಸಲಾಗುತ್ತದೆ.
ತುಳಸಿ ಕಟ್ಟೆ, ಹೊಸ್ತಿಲು, ಬಾವಿ, ತೆಂಗಿನ ಮರ ಮತ್ತು ಸೂರ್ಯನಿಗೆ ಚೂಡಿಯನ್ನು ಪ್ರತೀ ಶುಕ್ರವಾರ ಮತ್ತು ಭಾನುವಾರ ಭಕ್ತಿಯಿಂದ ಸಮರ್ಪಿಸಲಾಗುತ್ತದೆ. ಈ ಪೂಜೆಯ ಬಳಿಕ ಹಿರಿಯರಿಗೆ, ಬಂಧುಬಾಂಧವರಿಗೆ ಈ ಹೂವನ್ನು ನೀಡಿ ಆಶೀರ್ವಾದ ಪಡೆಯಲಾಗುತ್ತದೆ.
ಮುತ್ತೈದೆಯರು ಪರಸ್ಪರ ಹೂವನ್ನು ಹಂಚಿಕೊಂಡು, ಕುಂಕುಮ ನೀಡಿ ಈ ಆಚರಣೆಯ ಸೊಬಗನ್ನು ಹೆಚ್ಚಿಸುತ್ತಾರೆ. ನೈವೇದ್ಯಕ್ಕೆ ಕಡಲೆ ಮತ್ತು ಬೆಲ್ಲದ ಪಾಕದ ಪ್ರಸಾದ ನೀಡುವುದು ರೂಢಿ. ಇದು ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಸಕ್ಕರೆ ಅಥವಾ ಹಣ್ಣುಗಳನ್ನು ಸಹ ನೀಡಬಹುದು.
ದೇವ, ದೈವ ಮತ್ತು ನಿಸರ್ಗವನ್ನು ಆರಾಧಿಸುವ ಈ ಪ್ರಾಕೃತಿಕ ವಿಧಾನಗಳು ಎಂದಿಗೂ ಪ್ರಸ್ತುತ. ಈ ಸಂಪ್ರದಾಯಗಳು ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವ ಅಗತ್ಯವಿದೆ.
ಇದನ್ನೂ ಓದಿ : ನಾಗ ಪಂಚಮಿಯ ಸಿಹಿ ಖಾದ್ಯ - ಅರಶಿನ ಎಲೆ ಕಡುಬು
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

