ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೧ ೦
ನಮಸ್ತೆ.
ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!
ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.
ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು.
ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.
ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೯
ಸಂಚಿಕೆ ೧ ೦
ಬಡಪೆಟ್ಟಿಗೆ : ಸುಲಭವಾಗಿ
ಬಣ್ಣ ಕಟ್ಟಿ ಹೇಳು : ಉತ್ಪ್ರೇಕ್ಷಿಸಿ ಹೇಳು
ಬಣ್ಣ ಕಟ್ಟು : ಕಳೆಯೇರಿಸು, ಇಲ್ಲದ್ದನ್ನು ಸೇರಿಸು
ಬಣ್ಣದ ಚಿಟ್ಟೆ : ಸೊಗಸುಗಾತಿ
ಬಣ್ಣ ಬದಲಾಯಿಸು : ಸ್ವಭಾವ ಅಥವಾ ಧೋರಣೆಯನ್ನು ಬದಲಾಯಿಸು, ಒಂದೊಂದು ಸಲ ಒಂದೊಂದು ತೆರನಾಗಿರು
ಬಣ್ಣ ಬಯಲಿಗೆ ಬರು : ಒಳಗುಟ್ಟು ಗೊತ್ತಾಗು, ರಹಸ್ಯ ಬಯಲಾಗು
ಬದ್ಧಕಂಕಣನಾಗು : ಸಂಕಲ್ಪ ಮಾಡಿದವನಾಗು
ಬಲವಂತ ಮಾಘಸ್ನಾನ : ಒತ್ತಾಯದ ಕೆಲಸ
ಬಲಿಯಾಗು : ನಾಶಕ್ಕೆ ಗುರಿಯಾಗು
ಬಲೆಗೆ ಬೀಳು : ವಶಕ್ಕೆ ಸಿಕ್ಕು
ಬಳೆ ತೊಡಿಸು : ಬಂಧಿಸು, ಕೋಳ ಹಾಕು, ಅವಮಾನ ಪಡಿಸು
ಬಳೆತೊಡು : ಹೇಡಿಯಾಗು
ಬಾದರಾಯಣ ಸಂಬಂಧ : ಸುತ್ತು ಬಳಸಿನ ಸಂಬಂಧ
ಬಾಯಿಕಟ್ಟು : ಮಾತನಾಡದಿರು, ದಾಕ್ಷಿಣ್ಯಕ್ಕೆ ಸಿಕ್ಕು, ದಾಕ್ಷಿಣ್ಯಕ್ಕೆ ಸಿಕ್ಕಿಸು
ಬಾಯಿತುಂಬ : ಬಹಳ ಮಾತುಗಳಲ್ಲಿ, ಆತ್ಮೀಯವಾಗಿ
ಬಾಯಿ ಬಿಟ್ಟುಕೊಂಡು ಕುಳಿತಿರು : ಪ್ರತಿಫಲವನ್ನು ತುಂಬ ನಿರೀಕ್ಷಿಸುತ್ತಿರು
ಬಾಯಿಬಿಡು : ಆಶೆಪಡು
ಬಾಯಿ ಸತ್ತುಹೋಗು : ಮಾತನಾಡದ ಪರಿಸ್ಥಿತಿಯೊದಗು
ಬಾಯಿ ಹರಿಬಿಡು : ಹಿಂದೂ ಮುಂದು ನೋಡದೆ ಮಾತಾಡು
ಬಾಲ ಕತ್ತರಿಸು : ಸೊಕ್ಕು ಮುರಿ, ಹತೋಟಿಗೆ ತರು
ಬಾಲ ಬಡಿ : ಅನುಸರಿಸಿ, ಹೇಳಿದಂತೆ ಕೇಳು
ಬಾಲ ಬಿಚ್ಚು : ತುಂಟಾಟಕ್ಕೆ ತೊಡಗು, ಕೀಟಲೆ ಮಾಡು
ಬಾಳೆಯ ಹಣ್ಣಿನ ಗುಡಾಣದಲ್ಲಿ ಬೆಳೆ : ಸುಖವಾಗಿ ಬೆಳೆ
ಬಿಸಿನೆತ್ತರು : ಯೌವ್ವನ
ಬಿಸಿಬಿಸಿ ಸುದ್ದಿ : ಆಗ ತಾನೇ ಪ್ರಕಟವಾದ ಸುದ್ದಿ
ಬೀದಿ ಮಾತಾಗು : ಎಲ್ಲರಿಗೂ ತಿಳಿ
ಬೀದಿ ರಂಪವಾಗು : ಎಲ್ಲರಿಗೂ ತಿಳಿ
ಬುಟ್ಟಿಗೆ ಹಾಕಿಕೊಳ್ಳು : ಅಧೀನತೆಗೆ ತರು, ಆಕರ್ಷಿಸು, ವಶಪಡಿಸಿಕೊಳ್ಳು
ಬುರುಡೆ ಹೊಡೆ : ಸುಳ್ಳುಸುಳ್ಳು ಹೇಳು
ಬೆಂಕಿ ಕಾರು : ಅಸೂಯೆಯಿಂದಿರು
ಬೆಟ್ಟು ಮಡಿಸು : ಲೆಕ್ಕ ಹಾಕು
ಬೆಣ್ಣೆ ಹಚ್ಚು : ನಯಗಾರಿಕೆಯ ಮಾತಾಡು, ಕೆಲಸ ಸಾಧಿಸಿಕೊಳ್ಳಲು ನಯವಿನಯ ತೋರು
ಬೆನ್ನಿನಲ್ಲಿ ಇರಿ : ನಂಬಿಸಿ ಮೋಸಮಾಡು
ಬೆನ್ನು ಕಾಯಿ : ಸಂರಕ್ಷಿಸು, ಕಾಪಾಡು
ಬೆನ್ನು ಚಪ್ಪರಿಸು : ಪ್ರೋತ್ಸಾಹಿಸು
ಬೆನ್ನು ತಟ್ಟು : ಪ್ರೋತ್ಸಾಹಿಸು
ಬೆನ್ನು ತೋರಿಸು : ವಿಮುಖವಾಗು
ಬೆನ್ನು ಹತ್ತು : ಹಿಂಬಾಲಿಸು, ಕಾಡು
ಬೇರೂರು : ಸ್ಥಾಪನೆಗೊಳ್ಳು, ಬಲವಾಗಿ ನೆಲೆಯಾಗು
ಬೇಳೆ ಬೇಯು : ಮಾತು ನಡೆ, ಪ್ರಭಾವ ಫಲಿಸು
ಬೊಂಬಡಿ ಬಜಾಯಿಸು : ಗೋಳಿಡು, ಕೂಗಾಡು
ಭೂಮಿಗೆ ಭಾರ : ನಿಷ್ಪ್ರಯೋಜಕ
ಭೂಮಿತೂಕದ ಮನುಷ್ಯ : ತಾಳ್ಮೆಯ ಮನುಷ್ಯ, ದೊಡ್ಡ ಗುಣಗಳ ಮನುಷ್ಯ
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.
