ಇದೇ ಜೀವನ.. ಇದನ್ನೇ ಜೀವಿಸಿ..
ಅದೊಂದು ಮುಂಜಾನೆ ಧರಣಿ ಹಾಲು ತರಲು ರಸ್ತೆ ಬದಿಯ ಅಂಗಡಿ ಕಡೆಗೆ ಹೊರಟಿದ್ದಳು. ಅವಳ ಮನೆಯಿಂದ 4 ಮನೆ ಮುಂದೆ ಹೋದರೆ ಅಲ್ಲಿರುವುದು ಪರಮೇಶ್ವರ ಅಂಕಲ್ ಮನೆ. ಬೆಳಗ್ಗೆಯೇ ಮನೆ ಮುಂದೆಲ್ಲಾ ಜನ ಜಮಾಯಿಸಿದ್ದರು. ಅಲ್ಲೇ ಪ್ಲಾಸ್ಟಿಕ್ ಕಾರು ಹಿಡಿದುಕೊಂಡು ಮನೆ ಅಂಗಳದಲ್ಲಿ ಆಡುತ್ತಿದ್ದ ಅಂಕಲ್ ಮೊಮ್ಮಗ ಜೀವನನನ್ನು ಕರೆದು ಕೇಳಿದಾಗ, ಅವನು ತೊದಲು ನುಡಿಗಳಲ್ಲಿ, 'ಅಜ್ಜ ಮೇಲೆ ಹೋದ್ರಂತೆ. ದೇವರ ಹತ್ರ ' ಎಂದ. ಧರಣಿಗೆ ಊಹಿಸಲೂ ಆಗಲಿಲ್ಲ. ನಿನ್ನೆ ತಾನೇ, 'ಏನಮ್ಮಾ.. ಆರಾಮ ಅಲ್ವಾ? 'ಎಂದು ಕೇಳಿದ್ದ ಅಂಕಲ್ ಸತ್ತು ಹೋದರೇ? ಸಾವು ನಿಗೂಢ! ಎಂದುಕೊಳ್ಳುತ್ತಾ ಹೋದಳು.
ರಸ್ತೆ ಬದಿಯ ಅಂಗಡಿಯ ಹಿಂದೆಯೇ ಶರ್ಮಿಳಾ ಮನೆಯಲ್ಲಿಯೂ ಬೆಳಗ್ಗೆಯೇ ಜನ ಸೇರಿದ್ದರು. ಆದರೆ ಅಲ್ಲಿ ಸಡಗರ ತುಂಬಿತ್ತು. ವಾರದ ಹಿಂದಷ್ಟೇ ಶರ್ಮಿಳಾ ಅಮ್ಮ ಬಂದು ಅವಳ ಮದುವೆ ಕಾರ್ಡು ಕೊಟ್ಟು ಹೋಗಿದ್ದು ಜ್ಞಾಪಕ ಬಂತು. ' ಓಹ್... ಇವತ್ತು ಶರ್ಮಿಳಾ ಎಷ್ಟು ಚಂದ ಕಾಣಬಹುದು ' ಎಂದುಕೊಂಡವಳಿಗೆ ಪರಮೇಶ್ವರ್ ಅಂಕಲ್ ಮನೆ ಸಂದರ್ಭ ತಟ್ಟನೆ ನೆನಪಾಯಿತು.
' ಅಲ್ಲೊಂದು ಕಡೆ ಸ್ಮಶಾನ ಮೌನ, ಇನ್ನೊಂದೆಡೆ ಸಡಗರ. ಇಷ್ಟೇ ಜೀವನ. ಇದೇ ಜೀವನ ' ಧರಣಿ ನಸುನಕ್ಕಳು.
![]() |
| Captured by VarshaClicks |
ಜೀವನ ಇಷ್ಟೇ! ಸಾವು ಹಾಗೂ ಬದುಕಿನ ನಡುವಿನ ಸಣ್ಣದೊಂದು ಗ್ಯಾಪ್ ' ಜೀವನ '. ಅದನ್ನು ಜೀವಿಸುವುದನ್ನು ಕಲಿತರೆ ಬಹುಶಃ ಅಲ್ಲಿ ಎದುರಾಗುವ ತೊಡಕುಗಳು ಏನೇನೂ ಅಲ್ಲ ಅನ್ನಿಸಿಬಿಡುತ್ತೆ!!
ಇದನ್ನೂ ಓದಿ : ಇದುವೇ ಜೀವನ... ಇದುವೇ ಜೀವನಾನಂದ!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


