ಮೈಸೂರಿನ ಬೀದಿಗಳಲ್ಲಿ ಏಕಾಂಗಿ ಸಂಚಾರ
ಪ್ರವಾಸ ಎನ್ನುವುದೇ ಅನುಭವಗಳ ಮೂಟೆ. ಅದರಲ್ಲಿಯೂ ‘ಏಕಾಂಗಿ ಪ್ರವಾಸ’ ಅನ್ನುವುದು ಅನುಭವಗಳ ಗಣಿ ಇದ್ದಂತೆ. ಎಷ್ಟು ಬಗೆದರೂ ಅನುಭವಗಳು ದಕ್ಕುತ್ತಲೇ ಹೋಗುತ್ತವೆ. ಹಾಗಾಗಿ ಅವುಗಳಿಗೆ ಇಂದಿನ ಯುಗದಲ್ಲಿ ಮಹತ್ವ ಹೆಚ್ಚಿದೆ. ‘ಸೋಲೋ ಟ್ರಿಪ್’ ಎನ್ನುವ ಟ್ರೆಂಡ್ ಜನಪ್ರಿಯವಲ್ಲದೆ, ಹಲವು ಪಾಠ ಕಲಿಸುವ ಗುರುವೂ ಆಗಿದೆ.
ಈ ಏಕಾಂಗಿ ಪ್ರವಾಸ ಎನ್ನುವುದು ಎಲ್ಲರ ಕೈಯ್ಯಿಂದ ಸಾಧ್ಯವಾಗುವಂತದ್ದಲ್ಲ. ಅದಕ್ಕೆ ಮನಸು, ಧೈರ್ಯ ಮತ್ತು ಯೋಜನೆಯೂ ಬೇಕು. ಗುಂಪಾಗಿ ಹೊರಡುವ ಪ್ರವಾಸ ಹಾಗೂ ಏಕಾಂಗಿ ಪ್ರವಾಸಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇಲ್ಲಿ ನಿಮಗೆ ನೀವೇ ರಕ್ಷಕ, ಸಂಗಾತಿ, ಮಿತ್ರ, ಶತ್ರು ಎಲ್ಲವೂ.
ಪ್ರತಿಯೊಬ್ಬರಿಗೂ ತಮ್ಮ ಮೊದಲ ಏಕಾಂಗಿ ಪ್ರವಾಸ, ಅಲ್ಲಿ ಆದ ಅನುಭವಗಳ ಸ್ಪಷ್ಟವಾದ ಜ್ಞಾಪಕವಿರುತ್ತದೆ. ಹಾಗೆಯೇ ಇದು ನನ್ನ ಮೊದಲ ಸೋಲೋ ಟ್ರಿಪ್ ಕಥೆ. ಕೌಟುಂಬಿಕ ಕಾರಣಕ್ಕಾಗಿ ಕುಟುಂಬದೊಂದಿಗೆ ಮೈಸೂರಿಗೆ ತೆರಳುವ ಸಂದರ್ಭವೊಂದು ಅಚಾನಕ್ಕಾಗಿ ೩ ವರ್ಷಗಳ ಹಿಂದೆ ದೊರಕಿತು. ಆ ಊರಿಗೆ ಅದು ನನ್ನ ಮೊದಲ ಭೇಟಿ. ಆ ಸೊಬಗಿಗೆ ಮಾರುಹೋಗಿ ಅಲ್ಲಿಗೆ ಒಬ್ಬಳೇ ತೆರಳುವ ಯೋಜನೆ ಹಾಕಿಕೊಂಡೆ. ಅದೇ ನನ್ನ ಮೊದಲ ಸೋಲೋ ಟ್ರಿಪ್ ಆಯಿತು!
ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿ ನಾನು ಒಬ್ಬಳೇ ತೆರಳುವ ಯೋಜನೆ ಹಾಕಿಕೊಂಡಾಗ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿತ್ತು. ಅದು ಯಾವ ಗದ್ದಲವೂ ಇಲ್ಲದೆ ಆರಾಮಾಗಿ ಓಡಾಡಲು ಪ್ರಶಸ್ತ ಸಮಯವಲ್ಲವೆಂದು ತಿಳಿದಿದ್ದರೂ, ಮೈಸೂರಿನ ಆಕರ್ಷಣೆಯಿಂದ ಹೊರಬರಲಾರದೆ ತೆರಳಿಯೇ ಬಿಟ್ಟೆ.
ನಮ್ಮೂರಿನಿಂದ ಮೈಸೂರಿಗೆ ಅಜಮಾಸು ೬-೭ ಗಂಟೆಗಳ ಪಯಣ. ಮೈಸೂರಿನಲ್ಲಿ ನನ್ನ ನೆಂಟರ ಮನೆ ಇದ್ದ ಕಾರಣ ಉಳಿಯುವ ವ್ಯವಸ್ಥೆಗೆ ಯಾವುದೇ ತೊಂದರೆ ಇರಲಿಲ್ಲ. ಮೈಸೂರಿನಲ್ಲಿ ಪ್ರವಾಸೀ ತಾಣಗಳಿಗೆ ಯಾವ ಕೊರತೆಯೂ ಇಲ್ಲ. ದಸರಾ ಸಂದರ್ಭ ಆಗಿದ್ದರಿಂದ ಪ್ರತಿ ಬೀದಿಗಳಲ್ಲಿಯೂ ಜನಸಾಗರವಿತ್ತು.
ಬಸ್ ಪ್ರಯಾಣ ಯಾವತ್ತೂ ನನಗೆ ಪ್ರಿಯ. ಕಿಟಕಿ ಬದಿಯಲ್ಲಿ ಕುಳಿತು ಪ್ರಕೃತಿ ಸೌಂದರ್ಯ ಸವಿಯುತ್ತಾ, ಯಾವುದ್ಯಾವುದೋ ಯೋಚನೆಯಲ್ಲಿ ಮುಳುಗೇಳುತ್ತಾ ಮೈಸೂರು ತಲುಪಿದ್ದೇ ತಿಳಿಯಲಿಲ್ಲ.
ಒಂಟಿಯಾಗಿ ಸಂಚರಿಸುವಾಗ, ಅದರಲ್ಲೂ ಮೊದಲ ಬಾರಿ ಸಂಚರಿಸುವಾಗ ಒಮ್ಮೊಮ್ಮೆ ಅನಾಥ ಭಾವನೆ ಕಾಡುವುದಿದೆ. ನಿಮ್ಮಲ್ಲಿ ಎಷ್ಟು ಜನರಿಗೆ ಈ ಅನುಭವವಾಗಿದೆಯೋ ಗೊತ್ತಿಲ್ಲ, ಆದರೆ ನಮ್ಮವರು, ನಮ್ಮೂರು ಎಂಬ ಸರಹದ್ದು ದಾಟಿ, ಹೊಸ ಶಹರದಲ್ಲಿ ಒಬ್ಬಂಟಿಯಾಗಿ ಎಲ್ಲವನ್ನೂ ನಿಭಾಯಿಸಬೇಕಾಗಿ ಬಂದಾಗ ಯಾರಾದರೂ ಜೊತೆಗೆ ಇರಬೇಕು ಎಂದು ಪ್ರಾರಂಭದಲ್ಲಿ ಅನ್ನಿಸುವುದುಂಟು. ನನಗಾಗಿದ್ದು ಇದುವೇ. ಆದರೆ ಬಂದ ಕೆಲಸ ಅರ್ಧಕ್ಕೆ ನಿಲ್ಲಬಾರದು, ಅಲ್ಲದೆ ಇದು ನನ್ನ ಪಾಲಿನ ಹೊಸ ಅನುಭವ ಎಂದು ಸಾವರಿಸಿಕೊಂಡು ಮುಂದಾದೆ.
ಮೊದಲಿಗೆ ಹೋಗಿದ್ದು ತಾಯಿ ಚಾಮುಂಡಿ ನೆಲೆಸಿರುವ ವಿಶ್ವಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ. ಬೆಟ್ಟ ತಲುಪುವ ದಾರಿಯನ್ನು ನೋಡಿ ಮಂತ್ರಮುಗ್ಧಳಾಗಿದ್ದಲ್ಲದೆ, ಗಮ್ಯಸ್ಥಾನಕ್ಕೆ ತಲುಪಿದ ಮೇಲೆ ಕ್ಷೇತ್ರದ ಸೊಬಗನ್ನು ನೋಡಿದ ಮೇಲೆ ನಾನು ಪ್ರವಾಸಕ್ಕೆ ಆಯ್ದುಕೊಂಡ ಸ್ಥಳ ಸೂಕ್ತವಾಗಿದೆ ಎಂದು ನಿರ್ಧರಿಸಿಬಿಟ್ಟೆ. ತಾಯಿಯ ದರುಶನ ಯಾವುದೇ ತೊಂದರೆಯಿಲ್ಲದೆ ಆಯಿತು. ಆದ ಮೇಲೆಯೂ ಅಲ್ಲಿಂದ ಕದಲುವ ಮನಸಾಗಲಿಲ್ಲ.

ಕೊನೆಗೂ ಮನಸು ಮಾಡಿ ಎದ್ದಾಗ ನೆನಪಾಗಿದ್ದು ಮೃಗಾಲಯ. ಒಂದು ಮೃಗಾಲಯ ಇಷ್ಟು ಬೃಹತ್, ಸುಂದರ ಹಾಗೂ ಉತ್ತಮ ವಾತಾವರಣ ಹೊಂದಿರುತ್ತದೆ ಎನ್ನುವ ಕಲ್ಪನೆಯೂ ನನಗಿರಲಿಲ್ಲ. ಇಡೀ ಮೃಗಾಲಯವನ್ನು ಸುತ್ತುವುದಕ್ಕೆ ಸುಮಾರು ೩ ಗಂಟೆಗಳ ಕಾಲಾವಧಿ ಬೇಕಾಯಿತು. ಈ ನಡುವೆ ಆಗಾಗ ಮನೆ, ಮನೆಯವರ ನೆನಪಾಗುತ್ತಲೇ ಇತ್ತು.
ಬೆಳಗ್ಗಿನ ಶಾಂತ ಮೈಸೂರಿನ ಸೊಬಗನ್ನು ಕಣ್ತುಂಬಿಕೊಂಡ ಮೇಲೆ, ದಸರಾ ಸಮಯದಲ್ಲಿ ರಾತ್ರಿ ಹೊತ್ತು ಮಿಂಚುವ ನಗರವನ್ನು ನೋಡದಿದ್ದರೆ ಬಂದಿದ್ದೇ ವ್ಯರ್ಥ! ಆ ಜನದಟ್ಟಣೆ, ವಾಹನ ದಟ್ಟಣೆ ನೋಡಿದ ಮೇಲೆ ತುಸು ಅಳುಕಾದರೂ ನಗರ ಪ್ರದಕ್ಷಿಣೆ ಹಾಕತೊಡಗಿದೆ.
ಹಗಲು ಮತ್ತು ರಾತ್ರಿಯ ನಗರಕ್ಕೆ ಅದೆಷ್ಟು ವ್ಯತ್ಯಾಸವಿದೆ ಎಂದು ಬೆರಗಾಯಿತು. ಕಣ್ಣು ಕೋರೈಸುವ ಬೆಳಕಿನ ಮಧ್ಯೆ ನಗರ, ಬಹಳ ಸುಂದರವಾಗಿ ಕಾಣುತ್ತಿತ್ತು. ಆ ಬೆಳಕಿನ ಸೌಂದರ್ಯ ತನ್ನೊಳಗೆ ಪ್ರತಿಯೊಬ್ಬರನ್ನೂ ಸೆಳೆದುಕೊಳ್ಳುತ್ತಿತ್ತು. ನಗರದ ಪ್ರಮುಖ ವೃತ್ತಗಳು, ಕಟ್ಟಡಗಳು ತಮ್ಮದೇ ವಿಶಿಷ್ಟ ಬೆಳಕಿನ ವಿನ್ಯಾಸದೊಂದಿಗೆ ಕಂಗೊಳಿಸುತ್ತಿದ್ದವು.
ಈ ಪ್ರವಾಸದಲ್ಲಿ ನನಗೆ ಬಹಳಷ್ಟು ಹಿಡಿಸಿದ್ದು ದೇವರಾಜ ಮಾರುಕಟ್ಟೆ. ಈ ಪುರಾತನ ಮಾರುಕಟ್ಟೆಯಲ್ಲಿ ಒಂದು ಬಗೆಯ ಸೌಂದರ್ಯವಿದೆ. ಜನಜಂಗುಳಿ ಇದ್ದರೂ ಕಿರಿಕಿರಿ ಅನ್ನಿಸುವುದೇ ಇಲ್ಲ. ಸುಮ್ಮನೆ ಇಡೀ ಮಾರುಕಟ್ಟೆಯಲ್ಲಿ ಒಂದು ಸುತ್ತು ಹಾಕಿ, ಒಂದು ಕ್ಷಣವೂ ಅಲ್ಲಿ ನಿಲ್ಲದ ವ್ಯವಹಾರವನ್ನು ನೋಡುತ್ತಲಿದ್ದೆ. ಬಗೆಬಗೆಯ ವಸ್ತು, ಸರಕು, ದಿನಸಿ ಸಾಮಗ್ರಿಗಳು ಅಲ್ಲಿ ಬಿಕರಿಯಾಗುತ್ತಿದ್ದವು. ಮಾರುಕಟ್ಟೆಯನ್ನು ನನ್ನ ಮೊದಲ ಏಕಾಂಗಿ ಪ್ರವಾಸದ ಕೊನೆಯ ನಿಲ್ದಾಣವಾಗಿಸಿಕೊಂಡೆ. ಈ ನಡುವೆ ಜಡಿ ಮಳೆಯೂ ನನ್ನ ಸಂಗಾತಿಯಾಗಿತ್ತು.
ನನ್ನೀ ಪ್ರವಾಸ ಚಿಕ್ಕದಾದರೂ, ನಾನು ಕಲಿತ ಪಾಠಗಳು ಅದೆಷ್ಟೋ. ತಿಳಿಯದ ಊರಿನಲ್ಲಿ ಕೇಳಿ ಕೇಳಿ ದಾರಿ ತಿಳಿದುಕೊಂಡಿದ್ದು, ಮೃಗಾಲಯಕ್ಕೆ ಹೋಗುವಾಗ ದಾರಿ ತಪ್ಪಿದ್ದು, ಬಸ್ಸಿನಲ್ಲಿ ಅಪರಿಚಿತರ ಜೊತೆ ನಗು ಹಂಚಿಕೊಂಡಿದ್ದು, ಜ್ಯೂಸು ಅಂಗಡಿಯವನೊಂದಿಗೆ ಹರಟೆಗಿಳಿದಿದ್ದು, ಮೊದಲ ಬಾರಿಗೆ ವೋಲ್ವೋ ಬಸ್ ಅಲ್ಲಿ ಪ್ರಯಾಣಿಸಿದ್ದು, ಮನೆಯವರಿಗಾಗಿ ವಸ್ತು, ಬಟ್ಟೆಗಳನ್ನು ಖರೀದಿಸಿದ್ದು, ಬೀದಿ ಬೀದಿಗಳನ್ನು ಗೊತ್ತುಗುರಿಯಿಲ್ಲದೆ ಅಲೆದಿದ್ದು, ಒಂದೇ ಎರಡೇ.. ಹಿಂದೆ ಮುಂದೆ ಯೋಚಿಸದೆ ದಿಂಬು ಖರೀದಿಸಿ, ಅದನ್ನು ಊರಿನ ತನಕ ಹೊತ್ತುಕೊಂಡುವ ಹೋಗುವ ಮೂರ್ಖ ಕೆಲಸವನ್ನೂ ಮಾಡಿದೆ.
ಇದನ್ನೇ ಉತ್ತಮ ಪ್ರಾರಂಭಕ್ಕೆ ಮುನ್ನುಡಿಯಾಗಿಟ್ಟುಕೊಂಡು ಹಲವಾರು ಪ್ರವಾಸಿ ತಾಣಗಳಿಗೆ ಏಕಾಂಗಿಯಾಗಿ ಭೇಟಿ ನೀಡಿದೆ. ಅಗಣಿತ ಜೀವನ ಪಾಠಗಳನ್ನು ಪ್ರವಾಸದುದ್ದಕ್ಕೂ ಕಲಿತೆ. ಇಂದಿಗೂ ಈ ರೀತಿಯ ಪ್ರವಾಸ ನನಗಿಷ್ಟ. ಅದಕ್ಕಾಗಿ ಅವಕಾಶಗಳನ್ನು ಹುಡುಕುತ್ತಲೇ ಇರುತ್ತೇನೆ. ಜೀವನವನ್ನು ಹೊಸ ರೀತಿಯಲ್ಲಿ ಬದುಕಲು ಇಂತಹ ಬದಲಾವಣೆ, ಪ್ರಯೋಗಗಳ ಅಗತ್ಯ ಸಾಕಷ್ಟಿದೆ. ನೀವೂ ಒಮ್ಮೆ ಪ್ರಯೋಗಿಸಿ ನೋಡಿ!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.




