ಬರಹಕ್ಕೊಂದು ಕದನ ವಿರಾಮ!
ಕಥೆಯ ಎಳೆಯೊಂದು ಹುಟ್ಟಿ, ಅದೊಂದು ಮೂರ್ತ ರೂಪ ಪಡೆದು, ಪದಗಳಿಗೆ ಶತಾಬ್ಧಿ ರೈಲಿನ ವೇಗ ಸಿಕ್ಕಿ ಹೊಸದೊಂದು ಕಥೆ ನನ್ನೊಳಗೆ ರೂಪುಗೊಳ್ಳದೆ ಅದ್ಯಾವ ಕಾಲವೋ ಉರುಳಿದೆ! ಅದಕ್ಕೆ ಇದೇ ನಿರ್ದಿಷ್ಟ ಕಾರಣವೆಂದು ಹೇಳಲು ನನ್ನಲ್ಲಿ ಯಾವ ಕಾರಣವೂ ಇಲ್ಲ. ಕೆಲಸದ ಒತ್ತಡ ಎಂದು ಹೇಳಿ ಕಥೆಯ ಕೊಂಡಿಯಿಂದ ಜಾರಿಕೊಳ್ಳಲು ನನ್ನದು ಅಂತಹ ಒತ್ತಡಭರಿತ ಕೆಲಸವೂ ಅಲ್ಲ.
ಸುತ್ತಲೂ ನಡೆಯುವುದನ್ನು ತಲೆಗೆ ಹಚ್ಚಿಕೊಂಡು ಬರಹಕ್ಕೊಂದು ಕದನ ವಿರಾಮ ಘೋಷಿಸಿಬಿಡೋಣ ಎಂದರೆ; ಒಂದೋ ಸನ್ನಿವೇಶ, ಸಂದರ್ಭಗಳು ನನ್ನ ಗೋಜಿಗೆ ಬರುವುದಿಲ್ಲ. ಅಥವಾ ನಾನು ಅವುಗಳ ಗೋಜಿಗೆ ಹೋಗುವುದಿಲ್ಲ. ಬರೆದು ಬರೆದು ಅಲ್ಲೇ ಒರಗಿಬಿಡು ಬೇಕಾದರೆ ಎಂದು ಕಾಲ, ಜೀವನ ಇಷ್ಟು ಸಮಯ ಕೊಡುತ್ತಿರುವಾಗ ನಾನ್ಯಾಕೆ ಬರೆಯುತ್ತಿಲ್ಲ? ಯಾಕೋ ಬರೆಯಲಾಗುತ್ತಿಲ್ಲ ಎನ್ನುವ ಮಾನಸಿಕ ವೇದನೆಯಾಗುತ್ತಿದ್ದರೂ ಬರೆಯುವುದನ್ನು ನಿಲ್ಲಿಸುವ ಮನಸ್ಯಾಕೆ ಮಾಡುತ್ತಿಲ್ಲ?
ಕಥೆಯೊಂದು ಯಾಕೆ ಮೂಡುತ್ತಿಲ್ಲ? ಯಾಕದು ಇಷ್ಟೊಂದು ಸತಾಯಿಸುತ್ತಿದೆ? ಈ ಸತಾಯಿಸುವಿಕೆಗೆ ಕೊನೆಯೇ ಇಲ್ಲವೇ? ಈ ವೇದನೆಯಲ್ಲಿ ಯಾವ ಸುಖವೂ ಇಲ್ಲ.. ನನ್ನೊಳಗಿನ ಇನ್ನೂ ಜಗತ್ತು ನೋಡಿರದ ಕಥೆಗಾರ್ತಿ, ಇಂಚಿಂಚಾಗಿ ಅವಸಾನ ಹೊಂದುವುದನ್ನು ನಾನು ಖಂಡಿತ ಬಯಸುವುದಿಲ್ಲ.
![]() |
| Poster credit : Vanditha Prabhu |
ಕಥೆಯೊಂದು ಹುಟ್ಟಬೇಕು. ನವಜಾತ ಶಿಶುವಿನಂತೆ ಅದು ಮುದ್ದಾಗಿಯು, ಮೃದುವಾಗಿಯೂ ಇರಬೇಕು. ಎಲ್ಲರ ಕಣ್ಮನ ಸೆಳೆಯಬೇಕು. ಹಂತ ಹಂತವಾಗಿ ಬೆಳೆಯಬೇಕು. ಸುತ್ತಲೂ ಇರುವವರು ಅದನ್ನು, ಅದರ ಬೆಳವಣಿಗೆಯನ್ನು ಪೋಷಿಸಬೇಕು. ಅದು ಬೆಳೆಯುತ್ತಾ ಹೋದಂತೆ ತನ್ನದೇ ಜಗತ್ತೊಂದನ್ನು ಸೃಷ್ಟಿಸಬೇಕು. ಯೋಚನೆಗಳು ಇತರರಿಗಿಂತ ಭಿನ್ನವಾಗಿರಬೇಕು. ಮುನ್ನುಡಿ, ಬೆನ್ನುಡಿ, ಬಿಡುಗಡೆ, ಮಾರಾಟ…ಇದ್ಯಾವ ಬೇಲಿಯೂ ಇಲ್ಲದೆ, ಸ್ವತಂತ್ರವಾಗಿ, ತನ್ನದೇ ಓಘದಲ್ಲಿ ಸಾಗಬೇಕು. ಅಂಥದ್ದೊಂದು ಶಿಶು ಜನ್ಮತಾಳುವ ಘಳಿಗೆ ಯಾಕೋ ಬರುತ್ತಲೇ ಇಲ್ಲ!
ಇದನ್ನೂ ಓದಿ : ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ!’
ಎಲ್ಲಾ ಬರಹಗಾರರು, ಕಥೆಗಾರರು ಇದೇ ವೇದನೆಯನ್ನು ಅನುಭವಿಸುತ್ತಾರಾ? ಅಂತರಂಗದಲ್ಲಿ ಒಂದೂ ಪದ ಹುಟ್ಟದಂತೆ ಮಾಡುವ ಈ ಹಿಂಸೆ ಯಾರಿಗೆ ಪ್ರಿಯವಾಗುತ್ತದೆ? ಜೀವನದಲ್ಲಿ ಜಿಗುಪ್ಸೆ ತರಿಸಿ, ಹಿಂಡಿ ಹಿಪ್ಪೆ ಮಾಡುವವರೆಗೆ ಈ ನೋವಿಗೊಂದು ಕೊನೆಯಿಲ್ಲವೆನಿಸುತ್ತದೆ..
ಆದರೂ ನೋವಿನಲ್ಲಿಯೂ ಸುಖವಿದೆ ಎನ್ನುವಂತೆ, ಇವುಗಳ ಮಧ್ಯೆಯೂ ಒಂದು ಕಥೆ, ಕವನ ಹುಟ್ಟುವಾಗ, ಅದು ಮನಸು ತುಂಬಿದಾಗ ಆಗುವ ಅತುಲಿತ ಆನಂದ… ಆ ಹಿಂಸೆಯನ್ನು ನಮ್ಮ ಕೈಗೊಂಬೆಯನ್ನಾಗಿ ಮಾಡುತ್ತದೆ. ಕೈಗೊಂಬೆಯಾದ ಮೇಲೆ ಸೂತ್ರಧಾರನೇ ಆಡಿಸುವವನು. ನಾವು ಸೂತ್ರಧಾರಿ. ಆ ನೋವು ಪಾತ್ರಧಾರಿ.
ಆ ಸೂತ್ರಧಾರನಾಗುವ ಅವಕಾಶ ಎಲ್ಲರಿಗೂ ಒಲಿಯುವುದಿಲ್ಲ. ಒಲಿಸಿಕೊಂಡವನು ಹಿಂತಿರುಗಿ ನೋಡುವ ಮಾತೇ ಇಲ್ಲ! ಜಗತ್ತಿನ ಸಮಸ್ತ ಬರಹಗಾರರು ಸೂತ್ರಧಾರಿಗಳಾಗಲಿ. ಆ ಸೂತ್ರದ ಆಟದಲ್ಲಿ ಜಗತ್ತೇ ಬೆರಗಾಗುವ ಬರಹಗಳು ಮೂಡಿಬರಲಿ. ಆ ಸಾಲಿನಲ್ಲಿ ನನ್ನದೂ ಹೆಸರಿರಲಿ!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


