‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ!’
ಹೊರಗೆ ಒಂದಿನಿತೂ ಪುರುಸೊತ್ತು ಇಲ್ಲದ ಹಾಗೆ ಮಳೆ ಸುರಿಯುತ್ತಲೇ ಇತ್ತು. ಅಡುಗೆಮನೆಯಿಂದ ಹೊಗೆ ಏಳುತ್ತಿದ್ದುದನ್ನು ನೋಡಿ, ಈ ಮಳೆಗೊಂದು ಕಾಫಿ಼ ಕುಡಿಯಬೇಕೆಂದು ಅಮ್ಮ ನಿರ್ಧರಿಸಿಯಾಗಿದೆಯೆಂದು ಸೃಷ್ಟಿಗೆ ಗೊತ್ತಾಯಿತು. ‘ನಂಗೂ ಒಂದು ಲೋಟ ಕೊಡೇ’ ಎಂದು ಕೇಳುವ ಮನಸ್ಸಾದರೂ, ಕಿವಿಯಲ್ಲಿ ಹಾಡು ಗುನುಗುತ್ತಿತ್ತು. ಕಾಫಿ಼ ಹೋದರೂ ಪರವಾಗಿಲ್ಲ ಎಂದು ಒಂದೂ ಮಾತನಾಡದೇ ಹಾಡಿಗೆ ಕಿವಿಯಾದಳು.
ಮೆಲ್ಲಗೆ ಕಾಫಿ಼ಯ ಯೋಚನೆ ಮರೆಯಾಗುತ್ತಲೇ ಹಾಡಿನ ಸಾಲಿನಲ್ಲಿ ಅವಳ ಮನಸ್ಸು ಬೆರೆತುಹೋಯಿತು. ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಎಂದು ರಾಜು ಅನಂತಸ್ವಾಮಿ ಹಾಡುತ್ತಿದ್ದಂತೆಯೇ, ಇವಳು ಎದೆ ತುಂಬಾ ಸಾಲುಗಳನ್ನು ತುಂಬಿಕೊಂಡು, ಕೇಳುತ್ತಾ ಕೂತಳು. ಅವಳಿಗೆ ಇಡೀ ದಿನ ಹಾಡಿನ ಸಾಲಿಗೆ ಕಿವಿಯಾಗುವುದೇ ಕೆಲಸ.
ಅವಳ ಮೊಬೈಲಿನಲ್ಲಿರುವ ಅಜಮಾಸು ೫೦೦ ಹಾಡುಗಳ ಸಾಲುಗಳು ಅವಳ ನಾಲಿಗೆ ತುದಿಯಲ್ಲಿಯೇ ಇದೆ! ಆ ಪುಟ್ಟ ಮೆದುಳಿನ ಅರ್ಧ ಭಾಗ ಹಾಡಿನ ಸಾಲಿಗಾಗಿಯೇ ಮೀಸಲಾಗಿತ್ತು. ತಿಪ್ಪರಲಾಗ ಹಾಕಿದರೂ ಪುಸ್ತಕದಿಂದ ನಾಲಿಗೆಯವರೆಗೆ ಬರದ ಅನಾಟಮಿಯನ್ನು ನೆನೆದು ಅವಳಿಗೇ ಮರುಕ ಹುಟ್ಟಿತು. ‘ಅನಾಟಮಿ, ಮಣ್ಣು ಮಸಿ ಅಂತ ರಾಶಿ ಸಬ್ಜೆಕ್ಟ್ ಬದ್ಲು ನಿಮಗೆ ಬರೋ ಹಾಡಿನ ಲಿರಿಕ್ಸ್ ಬರೀರಿ ಅಂದಿದ್ರೆ ಪ್ರತೀ ವರ್ಷ ನಂಗೇ ಗೋಲ್ಡ್ ಮೆಡಲ್ ಬರ್ತಿತ್ತು’ ಎಂದು ಅವಳೇ ನಕ್ಕಳು.
ಅವಳ ಇನ್ನರ್ಧ ಮೆದುಳಿನಲ್ಲಿ ಇದ್ದಿದ್ದು ಅವಳ ಓದಿನ ಚಿಂತೆ, ಎಂ.ಬಿ.ಬಿ.ಎಸ್ ಹೇಗೆ ಪಾಸು ಮಾಡಲಿ? ಎಂಬ ಚಿಂತೆ, ನಪಾಸಾದರೆ ಅಪ್ಪ-ಅಮ್ಮನಿಗೆ ಹೇಗೆ ಮುಖ ತೋರಿಸಲಿ? ಎಂಬ ಚಿಂತೆ!! ಈ ಅರ್ಧ ಮೆದುಳಿನ ಮೇಲೆ ಇಷ್ಟೆಲ್ಲಾ ಹೊರೆ ಇದ್ದರೂ, ಅವಳು ಚಂದವಾಗಿ ಹಾಡುವ ಮೆದುಳನ್ನೇ ಪ್ರೀತಿಸುತ್ತಿದ್ದಳು.
ಅವಳೇನು ಬಯಸಿ ಬಯಸಿ ಅನಾಟಮಿ ಓದಲು ಕೂತವಳಲ್ಲ. ‘ನೀನು ಡಾಕ್ಟರ್ ಆಗದಿದ್ದರೆ ನನ್ನ ಮಾನ ಏನಾದೀತು?’ ಎಂದು ಬಾಯಿ ಬಾಯಿ ಬಡಿದುಕೊಂಡ ಅವಳ ಅಪ್ಪನಿಗಾಗಿ ಮೆಡಿಕಲ್ ಕಾಲೇಜಿನ ಮೆಟ್ಟಿಲು ಹತ್ತಿದ್ದಳು. ಅವಳ ಅಪ್ಪನಿಗೆ ಡಾಕ್ಟರ್ ಆಗಬೇಕೆಂಬ ಮಹದಾಸೆ ಇತ್ತು. ಆದರೆ ಅವರ ತಂದೆಯ ಆಸೆಯಂತೆ ಇಂಜಿನಿಯರ್ ಆಗಿದ್ದರು. ಅಪ್ಪನ ಆಸೆಗಾಗಿ ತನ್ನ ಆಸೆಯನ್ನೇ ಸಾಯಿಸಿದ ಆ ಯಾತನೆ ಅವರಿಗೆ ಗೊತ್ತಿದ್ದರೂ, ಹಳೇ ದ್ವೇಷ ಸಾಧನೆ ಮಾಡುವವರಂತೆ ಸೃಷ್ಟಿಯ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಿದ್ದರು. ಸೃಷ್ಟಿ, ಇಷ್ಟೆಲ್ಲಾ ಒತ್ತಡ ಇದ್ದರೂ ‘ಇನ್ಯಾವ ಹಾಡು ಡೌನ್ಲೋಡ್ ಮಾಡ್ಲಿ?’ ಅಂತ ಯೂಟ್ಯೂಬ್ ಅಲ್ಲಿ ಜಾಲಾಡುತ್ತಾ ಕೂರುತ್ತಿದ್ದಳು.
ಅವಳ ಬೇಜವಾಬ್ದಾರಿತನಕ್ಕೆ ರೋಸಿ ಹೋದ ಅವಳಪ್ಪ ಮೊಬೈಲ್, ಇಂಟರ್ನೆಟ್ ಬಂದ್ ಮಾಡುವ ಪ್ರಯತ್ನ ಮಾಡಿ ಸೋತಿದ್ದರು. ಸೃಷ್ಟಿ ತನ್ನ ಪಾಡಿಗೆ ತಾನಿರುವ ಹುಡುಗಿ. ಯಾರೇನೇ ಮಾಡಿದರೂ ತಿರುಗಿ ಬೀಳದೆ ಮೌನವಾಗಿರುತ್ತಿದ್ದಳು. ಅವಳ ನಿಗೂಢ ಮೌನಕ್ಕೆ ಬೆಚ್ಚಿಯೇ ಅವಳಪ್ಪ ಮತ್ತೆ ಹಾಡಿನ ಸಾಲುಗಳನ್ನು ಅವಳೆದೆಗೆ ತುಂಬಿದ್ದ.
ಸೃಷ್ಟಿಯ ಅಮ್ಮನಂತೂ ಅವಳ ಹಾಡಿನ ಪ್ರೀತಿಗೆ ಮಾರುಹೋದರೂ, ಅತ್ತ ಗಂಡನ ವಿರುದ್ಧ ತಿರುಗಿ ಬೀಳಲಾರದೆ, ಇತ್ತ ಮಗಳ ಕನಸಿಗೆ ನೀರೆರೆಯಲಾಗದೆ ಸುಮ್ಮನಿರುತ್ತಿದ್ದರು. ಆದರೂ, ಮುಂದೆ ತನ್ನ ಮಗಳು ಕುತ್ತಿಗೆಗೆ ಸ್ಟೆತಾಸ್ಕೋಪು ನೇತಾಡಿಸಿಕೊಂಡು ಓಡಾಡುವ, ತಾನು ಡಾ. ಸೃಷ್ಟಿಯ ಅಮ್ಮನೆಂದು ನಾಲ್ಕು ಜನರೆದುರು ಧಿಮಾಕಿನಿಂದ ಹೇಳುವ ಅವಕಾಶವನ್ನು ಕೈ ಚೆಲ್ಲಲು ಸಿದ್ಧರಿರಲಿಲ್ಲ.
ಅಪ್ಪ ಕೆಲಸ ಮುಗಿಸಿ ಮನೆಗೆ ಕಾಲಿಡುವವರೆಗೂ ಸೃಷ್ಟಿಯ ಸುತ್ತು ಸಾಹಿತ್ಯವೇ ಕುಣಿಯುತ್ತಿತ್ತು. ಅವಳದ್ದೇ ಹಾಡಿನ ಲೋಕದಲ್ಲಿ ವಿಹರಿಸುತ್ತಾ ಕುಳಿತವಳಿಗೆ, ಅಪ್ಪ ಬಂದೊಡನೆ ಏನೇನೂ ಇಲ್ಲದ ಅಸ್ಥಿಪಂಜರದೊಡನೆ ಮಾತಿಗೆ ಕುಳಿತುಕೊಳ್ಳುವ ಅನಿವಾರ್ಯತೆ ಇರುತ್ತಿತ್ತು.
![]() |
| Picture credit : Internet |
ಮನೆಯಿಂದ ಕಾಲೇಜು ೩೦ ನಿಮಿಷ ದೂರವಿತ್ತು. ‘ಬಸ್ಸಿನಲ್ಲಿ ಹೋಗು’ ಎಂದರೆ ‘ವಾಂತಿ ಬಂದ ಹಾಗೆ ಆಗುತ್ತೆ ಕಣೇ ಅಮ್ಮ’ ಅಂತ ಸುಳ್ಳಂಪಟ್ಟೆ ಹೇಳುತ್ತಿದ್ದಳು. ಆ ೩೦ ನಿಮಿಷ ಕಿವಿಗೆ ಇಯರ್ಫೋ಼ನ್ ಸಿಕ್ಕಿಸಿ, ಲಿರಿಕ್ಸ್ ಲೋಕದಲ್ಲಿ ಮುಳುಗೇಳುತ್ತಿದ್ದಳು. ಬೃಹತ್ ಕಾಲೇಜಿನ ಮೆಟ್ಟಿಲು ಹತ್ತಿದ ಮೇಲೆ ದಪ್ಪ ಪುಸ್ತಕಗಳ ಮರೆಯಲ್ಲಿ ಹುದುಗಿ ಕೂತ ಸಾಹಿತ್ಯವನ್ನು ಸಂಜೆ ಹುಡುಕುತ್ತಿದ್ದಳು.
ಇದೆಲ್ಲಾ ಅವಳ ಅಪ್ಪನಿಗೆ ಗೊತ್ತಿದ್ದರೂ ಅವರು ಅದ್ಯಾವುದೋ ಸುಳಿಗೆ ಸಿಕ್ಕವರಂತೆ ಒದ್ದಾಡುತ್ತಿದ್ದರು. ಅತ್ತ ಅವಳನ್ನು ಅವಳಿಷ್ಟಕ್ಕೆ ಬಿಡುತ್ತಿರಲಿಲ್ಲ, ಇತ್ತ ತಮ್ಮ ಜೀವನವನ್ನು ತಾವು ಪ್ರೀತಿಸುತ್ತಿರಲಿಲ್ಲ...
ಇದನ್ನೂ ಓದಿ : ಮಿಂಚಾಗಿ ಬಂದ ಹುಡುಗ
ಅದೊಂದು ದಿನ ರೆಕಾರ್ಡ್ ಪುಸ್ತಕ ಭರ್ತಿಯಾಗಿಲ್ಲವೆಂದು ಅರ್ಧ ದಿನ ತರಗತಿಯಿಂದ ಹೊರಗುಳಿದಿದ್ದ ಸೃಷ್ಟಿಗೆ ಅದುಮಿಡಲಾಗದಷ್ಟು ಕೋಪ, ಯಾತನೆ, ಕಣ್ಣೀರು, ಅಸುರಕ್ಷತೆ, ಭಯವೇ ಮುಂತಾದ ಮಿಶ್ರ ಭಾವನೆ ಒಸರುತ್ತಿತ್ತು. ಇದೆಲ್ಲವನ್ನೂ ತಹಬದಿಗೆ ತರುವ ಪ್ರಚಂಡ ಶಕ್ತಿ ಇದ್ದಿದ್ದು ಹಾಡಿಗೆ ಮಾತ್ರ!
ದಾರಿಯುದ್ದಕ್ಕೂ ಹಾಡು ಕೇಳಿದ ಮೇಲೆ ಮನಸ್ಸು ಒಂದಿಷ್ಟು ಸಮಾಧಾನಗೊಂಡಿತ್ತು. ಮನೆ ತಲುಪಿದವಳೇ ಶಾಸ್ತ್ರಕ್ಕೆ ಸ್ನಾನ, ತಿಂಡಿ ಮಾಡಿ, ಮತ್ತೆ ಹಾಡಿಗೆ ಕಿವಿಯಾಗುತ್ತಾ ಕುಳಿತಳು. ಮನೆಯ ಪಕ್ಕದಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಅಲ್ಲಿ ಕಿವಿಗಡಚಿಕ್ಕುವ ಹಾಗೆ ಭಕ್ತಿಗೀತೆಗಳನ್ನು ಹಾಕಿದ್ದರೂ, ಅದ್ಯಾವುದರ ಪರಿವೇ ಇಲ್ಲದೆ, ಹಾಗೇ ಸಾಹಿತ್ಯದ ಸಾಲಿನಲ್ಲಿ ಮರೆಯಾದವಳಿಗೆ ಎದುರಿಗೆ ಅಪ್ಪ ನಿಂತಿದ್ದು ತಿಳಿಯಲೇ ಇಲ್ಲ.
ಅವರನ್ನು ಕಂಡು ಸೃಷ್ಟಿಯ ಸರ್ವಾಂಗ ಬೆವರಿತು. ಅಪ್ಪನಂತೂ ಸಾಕ್ಷಾತ್ ಉಗ್ರನರಸಿಂಹನ ಅಪರಾವತಾರದಂತೆ ಕಂಡರು. ಅದೆಷ್ಟೋ ದಿನದಿಂದ ಅದುಮಿಕೊಂಡಿದ್ದ ಬೈಗುಳಗಳೆಲ್ಲಾ ಪುಂಖಾನುಪುಂಖವಾಗಿ ಹೊರಬರುತ್ತಿದ್ದ ಹಾಗೇ, ಸೃಷ್ಟಿ ಉಸಿರು ಬಿಗಿಹಿಡಿದು ಓಡತೊಡಗಿದಳು. ಮಗಳೇನಾದರೂ ಮಾಡಿಕೊಂಡಾಳು ಎಂಬ ಭಯದಿಂದ ಅಪ್ಪ, ಅಮ್ಮ ಅವಳ ಹಿಂದೆ, ಕೂಗಿ ಕರೆದು ಓಡುತ್ತಿದ್ದ ಹಾಗೆಯೇ ಅವಳು ಗಣೇಶೋತ್ಸವದ ವೇದಿಕೆ ಹತ್ತುತ್ತಿರುವುದು ಕಂಡಿತು.
ಏದುಸಿರು ಬಿಡುತ್ತಾ ವೇದಿಕೆಯ ಬಳಿ ಸಾರಿದವರಿಗೆ ಸೃಷ್ಟಿ ಕಣ್ಮುಚ್ಚಿ ಭಾವಪರವಶಳಾಗಿ ಹಾಡುವುದು, ಜನ ಒಂದೇ ಸಮ ಚಪ್ಪಾಳೆ ತಟ್ಟುತ್ತಿರುವುದು ಕಂಡುಬಂತು.
ತನಗಿದರ ಗೊಡವೆಯೇ ಇಲ್ಲದಂತೆ ಸೃಷ್ಟಿ ಹಾಡುತ್ತಲೇ ಇದ್ದಳು,,
“ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ.. ಹಾಡುವುದು ಅನಿವಾರ್ಯ ಕರ್ಮ ನನಗೆ!
ಕೇಳುವವರಿಹರೆಂದು ನಾ ಬಲ್ಲೆನದರಿಂದ, ಹಾಡುವೆನು ಮೈದುಂಬಿ ಎಂದಿನಂತೆ,
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ”
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


