ಎಲ್ಲಿದ್ದಾನೆ ದೇವರು?!
ಅದೊಂದು ಪುಟ್ಟ ಸಂಸಾರ. ಗಂಡ-ಹೆಂಡತಿ, ಒಂದು ಗಂಡು, ಮತ್ತೊಂದು ಹೆಣ್ಣು ಮಕ್ಕಳು. ಪರಸ್ಪರ ಪ್ರೀತಿ, ಕಾಳಜಿ, ವಿಶ್ವಾಸ ಹಾಗೂ ಆನಂದದಿಂದ ತುಂಬಿದ ಮನೆ ಅದು.
ತಂದೆ ಎರಡು ಕೈಯಿಂದ ದುಡಿದರೆ ಮಾತ್ರ ಉಳಿದ ಆರು ಕೈಗಳು ಉಣ್ಣಲು, ಬದುಕಲು ಸಾಧ್ಯ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ಅವರೊಳಗಿನ ಬಾಂಧವ್ಯಕ್ಕೆ ಒಂದಿನಿತೂ ಧಕ್ಕೆಯಾಗಿರಲಿಲ್ಲ. ಇಬ್ಬರು ಮಕ್ಕಳು ಮನಸ್ಸಿಟ್ಟು ಓದುತ್ತಿದ್ದರು. ಮುಂದೆ ಒಳ್ಳೆಯ ಉದ್ಯೋಗ ಪಡೆದು ಅಪ್ಪ ಅಮ್ಮನ ಕನಸನ್ನು ನನಸು ಮಾಡುವ ಬಲವಾದ ಯೋಚನೆ, ಆಸೆ ಅವರಲ್ಲಿ ಬೇರೂರಿತ್ತು.
ಕಾಲ ಒಂದೇ ರೀತಿ ಇರುವುದಿಲ್ಲ ತಾನೇ? ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆಯೇ ದೊಡ್ಡ ಮಗಳು ಪೂರಾ ಬದಲಾದಳು. ದೇವರು-ದಿಂಡಿರು, ಮೂಢನಂಬಿಕೆ, ಪೂಜೆ-ಪುನಸ್ಕಾರ, ಹರಕೆ ಇವುಗಳಲ್ಲಿ ಒಂದು ವಿಧವಾದ ನಿರಾಸಕ್ತಿ ಭಾವ ತಳೆದಳು. ಮೊದಲಿನಿಂದಲೂ ದೇವರ ಮೇಲಿನ ಭಕ್ತಿ ಅಷ್ಟಕ್ಕಷ್ಟೇ. ತನಗೆ ಖುಷಿಯಾದಾಗ, ಬೇಸರವಾದಾಗ, ಆತಂಕವಾದಾಗ ಪೂರ್ಣ ಮನಸ್ಸಿನಿಂದ ದೇವರನ್ನು ನೆನೆಯುವುದು. ಇದೇ ಅವಳ ಭಕ್ತಿಯ ರೀತಿ.
"ಒಂಟಿ ಸೀನು ಬರಬಾರದು, ಹೊರಡುವಾಗ ಎಲ್ಲಿಗೆ? ಎಂದು ಕೇಳಬಾರದು" ಎಂದು ಅಮ್ಮ ಹೇಳುವಾಗ "ಯಾಕೆ?" ಎಂದು ಕೇಳಿ ಕೇಳಿ ಪೀಡಿಸುತ್ತಿದ್ದಳು. "ನನಗೆ ಗೊತ್ತಿಲ್ಲ. ನನ್ನ ಅಮ್ಮ ಹೇಳ್ತಾ ಇದ್ಲು" ಎಂಬುದು ಅಮ್ಮನ ಸಿದ್ಧ ಉತ್ತರವಾಗಿತ್ತು. "ಗೊತ್ತಿಲ್ಲದ ಮೇಲೆ ಯಾಕೆ ಪಾಲಿಸ್ತೀಯಾ?" ಮಗಳ ತಿರುಗುಬಾಣ. ಅಮ್ಮ ಉತ್ತರ ನೀಡದೆ ಸುಮ್ಮನೆ ಹೊರಟುಹೋಗುವ ಮೂಲಕ ಅವರ ವಾಗ್ವಾದ ಮುಗಿಯುತ್ತಿತ್ತು.
ಅಪ್ಪ ಮೊದಲೇ ದುಡಿಯುವ ಜೀವ. ದಿನವೆಲ್ಲಾ ಬೆವರಿಳಿಸಿದ ದೇಹ ರಾತ್ರಿ ಸಾಕಷ್ಟು ವಿಶ್ರಾಂತಿ ಬಯಸುತ್ತಿತ್ತು. ಆದರೆ ಅಪ್ಪ ಮನೆಗೆ ಬಂದ ಮೇಲೆ ಮಗಳ ಪ್ರಶ್ನೆ, ವಾದ ಸರಣಿ ಆರಂಭವಾಗುತ್ತಿತ್ತು. ಅಪ್ಪನೂ ತನಗೆ ತಿಳಿದುದನೆಲ್ಲಾ ಹೇಳುತ್ತಿದ್ದ. ಅಮ್ಮನಿಗಿಂತ ಅಪ್ಪ ನೀಡುವ ಉತ್ತರ ಮಗಳಿಗೆ ಸಮಾಧಾನಕರವಾಗಿ ತೋರುತ್ತಿತ್ತು. ಕಾಣದ ದೇವರ ವಿಷಯದಲ್ಲಿ ಅವಳಿಗೆ ಅಸಂಖ್ಯ ಪ್ರಶ್ನೆಗಳಿರುತ್ತಿದ್ದವು.
ಇದಕ್ಕಾಗಿ ಸಾಹಿತ್ಯದ ಮೊರೆ ಹೋದಳು. ಭಾರತೀಯ ದರ್ಶನ ಶಾಸ್ತ್ರಗಳನ್ನು ಹಗಲು-ರಾತ್ರಿ ಓದಿದಳು. ಅಧ್ಯಾಪಕರೊಡನೆ, ಸ್ನೇಹಿತರೊಡನೆ ಚರ್ಚಿಸುತ್ತಿದ್ದಳು. ಎಷ್ಟೇ ಪ್ರಯತ್ನಿಸಿದರೂ ದೇವರ ಬಗ್ಗೆ ಸ್ವಂತ ತೀರ್ಮಾನಕ್ಕೆ ಬರಲು ಅವಳಿಂದ ಸಾಧ್ಯವಾಗಲೇ ಇಲ್ಲ. ಕೊನೆಗೂ ದೇವರು ಅವಳ ಪಾಲಿಗೆ ಕಗ್ಗಂಟಾಗಿಯೇ ಉಳಿದ. ಆತನ ಅಸ್ತಿತ್ವದ ಬಗ್ಗೆ ಬಹುಶಃ ಯಾರೂ ಉತ್ತರಿಸಲಾರರೇನೋ? ಎಂದು ತೀರ್ಮಾನಿಸಿದ್ದಳು.
"ದೇವರು ಇದ್ದಾನೋ? ಇಲ್ಲವೋ?" ಎಂಬ ವಿಷಯದ ಮೇಲೆ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. "ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ" ಎನ್ನುವ ಮಾತಿನಂತೆ ಸ್ಪರ್ಧೆಗೆ ಇವಳನ್ನು ಆಯ್ಕೆ ಮಾಡಲಾಯಿತು. ಮೊದಲೇ ದೇವರ ಬಗ್ಗೆ ಸ್ವತಂತ್ರ ತೀರ್ಮಾನಕ್ಕೆ ಬರಲು ಸಾಧ್ಯವಾಗದ್ದಕ್ಕೆ ಆ ಸರ್ವಾಂತರ್ಯಾಮಿ ಮೇಲಿದ್ದ ಮುನಿಸನ್ನು ತೀರಿಸಲು, ದೇವರು ಇಲ್ಲವೇ ಇಲ್ಲ ಎಂದು ವಾದ ಮಾಡಲು ಯೋಚಿಸಿದಳು.
ಕಾಲೇಜು ಬಿಟ್ಟ ನಂತರ ದಾರಿಯುದ್ದಕ್ಕೂ ಅದೇ ಯೋಚನೆ. ಏನೆಲ್ಲಾ ಮಾತನಾಡಬಹುದು? ಎಂದು ಯೋಚನೆ ಮಾಡುತ್ತಾ ದಾಟುತ್ತಿದ್ದವಳಿಗೆ ಎದುರಿನಿಂದ ಬಂದ ಆಟೋ ಕಾಣದೆ ಹೋಯಿತು. ಕಣ್ಣು ಬಿಟ್ಟವಳಿಗೆ ಸುತ್ತ ಕಂಡದ್ದು ಅಪರಿಚಿತ ಮುಖಗಳು. ಆಗಲೇ ತಿಳಿದದ್ದು ತನಗೆ ಆಟೋ ಗುದ್ದಿದೆ, ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ. ಅದಕ್ಕೂ ಮಿಗಿಲಾಗಿ ತನ್ನ ಜೀವ ಉಳಿಸಿದ್ದು ಈ ಅಪರಿಚಿತರು.
ಈಕೆ ಕಣ್ಣು ಬಿಟ್ಟ ಕೂಡಲೇ ಸುತ್ತಲಿದ್ದವರೆಲ್ಲರ ಕಣ್ಣಲ್ಲಿ ಮಿಂಚು ಸುಳಿಯಿತು. ಅವಳ ತಂದೆಯ ನಂಬರ್ ಪಡೆದು ವಿಷಯ ತಿಳಿಸಲನುವಾದರು. ಆಸ್ಪತ್ರೆಗೆ ಧಾವಿಸಿ ಬಂದ ಹೆತ್ತವರ ಗಾಬರಿ ಕಡಿಮೆಗೊಳಿಸಿದ್ದು ಇದೇ ಅಪರಿಚಿತರು!
ತಂದೆ ತಾಯಿಯೊಡನೆ ಆಸ್ಪತ್ರೆಯಿಂದ ಮರಳುವಾಗ ಕೃತಜ್ಞತೆ ತುಂಬಿದ ಕಂಗಳಿಂದ ಅವರನ್ನು ನೋಡಿ, ಹೃದಯಾಂತರಾಳದಿಂದ ವಂದಿಸಿದಳು.
ಮನೆಗೆ ಮರಳಿದ ಮೇಲೆ ಅಪ್ಪ ಹೇಳಿದ್ದು ಕೇಳಿಸಿತು; "ದೇವರೇ ಅವಳನ್ನು ಅವರ ರೂಪದಲ್ಲಿ ಬಂದು ಕಾಪಾಡಿದ". "ದೇವರಲ್ಲದೇ ಮತ್ಯಾರು ಇದನ್ನೆಲ್ಲಾ ಮಾಡ್ತಾರೆ ನೀವೇ ಹೇಳಿ' ಅಮ್ಮನ ಅಂಬೋಣ. ಇವಳ ಮಂಚದ ಪಕ್ಕ ಕುಳಿತ ತಮ್ಮ ಮುಸಿಮುಸಿ ನಗುತ್ತಿದ್ದ.
"ಹಾಗಾದರೆ ದೇವರು ಯಾರು? ಅವನು ಎಲ್ಲಿದ್ದಾನೆ?" ಇದೇ ಚರ್ವಿತಚರ್ವಣ ಪ್ರಶ್ನೆಗಳನ್ನು ನೆನೆಯುತ್ತಾ ಕಣ್ಣು ಮುಚ್ಚಿದವಳಿಗೆ ಕಂಡದ್ದು ಅದೇ ಅಪರಿಚಿತ ಮುಖಗಳು…
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

