ಪರಿಸರ ಮತ್ತು ನರಮನುಷ್ಯನ ಸಮಾಗಮ
ನಾವು ಎಲ್ಲರನ್ನು ಪ್ರಕೃತಿಯಲ್ಲಿ ಕಾಣುವ ಪ್ರಯತ್ನವನ್ನೇಕೆ ಮಾಡುತ್ತೇವೆ? ಪ್ರತಿಯೊಬ್ಬರನ್ನು ಪ್ರಕೃತಿಯ ಅಂಶದೊಡನೆ ಬೆರೆಸುವ ಈ ಚಟ ನಮಗೇಕೆ? ಇಷ್ಟೆಲ್ಲಾ ಪ್ರಗತಿ ಕಂಡ ಮನುಷ್ಯ, ಪ್ರಕೃತಿ ಇಲ್ಲದೆ ಯಾಕೆ ಬದುಕಲಾರ? ಎನ್ನುವ ಪ್ರಶ್ನೆ "ನಾವು ಮುಂದುವರೆದಿದ್ದೇವೆ" ಎಂದು ಅಂದುಕೊಂಡಿರುವ ನಮ್ಮ ತಲೆಯಲ್ಲಿ ಎಷ್ಟೋ ಸಾರಿ ಹಾದುಹೋಗಿರಬಹುದು. ಯಾಕೆ ಪ್ರಕೃತಿ ನಮ್ಮನ್ನು ಅಷ್ಟರ ಮಟ್ಟಿಗೆ ಆವರಿಸಿಕೊಂಡಿದೆ?
ಅದಕ್ಕೆ ಉತ್ತರ ಸಾವಿರಾರು ಇರಬಹುದು. ಒಬ್ಬರ ತಲೆಯಲ್ಲಿ ಸಾವಿರಾರು ಉತ್ತರಗಳಿರಬಹುದು. ಅಥವಾ ಸಾವಿರಾರು ಜನರ ತಲೆಯಲ್ಲಿ ಒಂದೇ ಉತ್ತರ ಇರಬಹುದು. ಒಬ್ಬರ ಉತ್ತರ ಒಬ್ಬರಿಗೆ ಮೆಚ್ಚುಗೆ ಆಗದೇ ಇರಬಹುದು. ಕೆಲವರಿಗೆ ಪ್ರಶ್ನೆಯೇ ಹಿಡಿಸದಿರಬಹುದು. ಪ್ರಶ್ನೋತ್ತರದ ಈ ತಿಕ್ಕಾಟ ನಿರಂತರವಾಗಿ ಸಾಗುತ್ತಿದ್ದರೂ, ಉತ್ತರ ಸಿಗದ ಪ್ರಶ್ನೆ, ಮತ್ತೊಂದು ಪ್ರಶ್ನೆ ಉದ್ಭವಿಸುವಂತೆ ಮಾಡುವ ಉತ್ತರ, ಇವುಗಳಿಗೆ ಕೊನೆಯೇ ಇಲ್ಲ.
![]() |
| Captured by VarshaClicks |
ಪ್ರಕೃತಿ ಚಿರನೂತನೆ. ಅರಸಿದಷ್ಟು ಅಚ್ಚರಿ ಹುಟ್ಟಿಸುವ ನಿತ್ಯನೂತನೆ. ಅರಗಿಸಿಕೊಳ್ಳಲಾಗದ ಸತ್ಯದ ಮೂಟೆಯನ್ನೇ ಕಾಲಗರ್ಭದಲ್ಲಿ ಹುದುಗಿಸಿಟ್ಟ ನಿಗೂಢ ಚಿರಯೌವ್ವನೆ. ಕಂಡಷ್ಟು ತೃಪ್ತಿ ನೀಡದ ಕಣ್ಮಣಿ. ಬಗೆದಷ್ಟು ಬೇಸರಿಸಿಕೊಳ್ಳದ ಸಹನಾ ಮೂರ್ತಿ ಅವಳು.
ಸಾಕಲ್ಲವೇ ಇಷ್ಟು ಕಾರಣಗಳು? ಅವಳನ್ನು ನಮಗಿಂತ ಎತ್ತರದ ಸ್ಥಾನದಲ್ಲಿ ನೋಡಲು. ಅವಳಿಗೆ ಇನ್ನಷ್ಟು ಹತ್ತಿರವಾಗಲು. ಅವಳನ್ನು ನಮ್ಮ ಉಸಿರಿನ ಕೊನೆಯ ಗತಿಯವರೆಗೂ ಕಾಪಾಡುವ ಪಣ ತೊಡಲು. ಸಾಕೇನೋ?!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


