ಮುಂದೇನಾಯ್ತು?!

 ತಾರೀಕು  : 01 ಮಾರ್ಚ್ 2021           ಸಮಯ : ಸಂಜೆ 06:45

            ಅವನದ್ದು ಸರಳ, ಸುಂದರ ನಗು. ತುಂಬು ಗಡ್ಡ. ಹುರಿ ಮೀಸೆ. ಅದರ ನಡುವೆ ಸಿಕ್ಕಿಕೊಂಡಿದ್ದ ಅರೆ ಒಡೆದ ತುಟಿ ಅಡಗಿ ಕೂತಿತ್ತು. ಆಗಾಗ ಕತ್ತಲ ಕೋಣೆಗೆ ಬೆಳದಿಂಗಳ ಬೆಳಕು ತೂರುವಂತೆ ಅವನು ನಗುತ್ತಿದ್ದ. ಅವನದ್ದು ಚಂದದ ನಗು. ನಾನದಕ್ಕೆ ಯಾವಾಗಲೋ ಬಿದ್ದಾಗಿತ್ತು.

            ಅವನನ್ನು ನಾನಂದು ನೋಡಿದ್ದು ನಮ್ಮ ‘ಸಾಹಿತ್ಯ ಪ್ರೇಮಿಗಳು’ ವಾಟ್ಸಾಪ್ ಗುಂಪಿನ ‘ಗೆಟ್ ಟುಗೆದರ್’ ಕಾರ್ಯಕ್ರಮದಲ್ಲಿ. ಅವನೇ ಸಭೆಯ ನಿರೂಪಕ. ಅವನ ಕನ್ನಡ ಸ್ವಚ್ಛವಾಗಿತ್ತು. ನಿರೂಪಣೆ ಸೊಗಸಾಗಿತ್ತು. ನಗುವಂತೂ... ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ!!!


ತಾರೀಕು : 03 ಮಾರ್ಚ್ 2021            ಸಮಯ : ಸಂಜೆ 07:00

            ಅವತ್ತು ಹೊರಗೆ ಬಹಳ ತಂಪಾದ ವಾತಾವರಣವಿತ್ತು. ನಾನು ರೂಮಿನಲ್ಲಿ ಮಂಚಕ್ಕೊರಗಿ, ತಲೆಯ ಮೂಲೆಯಲ್ಲಿದ್ದ ಒಂದು ಕಥೆಗೆ ರೂಪ ಕೊಡುತ್ತಿದ್ದೆ. ತುಂಬಾ ಹೊತ್ತು ಕಾಡಿಸಿದ ಮೇಲೆ ಮನಸ್ಸು, ತಲೆ ಒಂದಾಗಿ ಪುಟ್ಟದೊಂದು ಕಥೆ ಹುಟ್ಟಿಕೊಂಡಿತು. ಹಾಗೇ ‘ಯಾವ ಕವಿಯು ಬರೆಯಲಾರ, ಒಲವಿನಿಂದ, ಕಣ್ಣೋಟದಿಂದ’ ಎಂದು ಹಾಡುತ್ತಿದ್ದ ಲ್ಯಾಪ್‌ಟಾಪನ್ನು ಎತ್ತಿಕೊಂಡು, ಕೀ ಬೋರ್ಡ್ ಮೇಲೆ ಟಕಟಕನೆ ಬೆರಳಾಡಿಸಿದೆ.

            ಅರ್ಧ ಗಂಟೆಯಲ್ಲಿ ನನಗೆ ಬೇಕಾದ ಹಾಗೆ ಕಥೆ ರೂಪುಗೊಂಡಿತು. ಬ್ಲಾಗಿನಲ್ಲಿ ಅದನ್ನು ಪ್ರಕಟಿಸಿ, ಅದರ ಕೆಳಗೆರಡು ಸಾಲು ಬರೆದು, ನನ್ನ ವಾಟ್ಸಾಪ್ ಭರ್ತಿ ತುಂಬಿಕೊಂಡಿದ್ದ  ಸಾಹಿತ್ಯದ ಗ್ರೂಪುಗಳಿಗೆಲ್ಲಾ ರವಾನಿಸಿದೆ.  ‘ಸಾಹಿತ್ಯ ಪ್ರೇಮಿಗಳು’ ಗ್ರೂಪಿಗೂ ಕೂಡಾ.


ತಾರೀಕು : 04 ಮಾರ್ಚ್ 2021            ಸಮಯ : ಬೆಳಗ್ಗೆ 11:30

            ‘ಹೇಗೂ next class ಇರೋದು 12 ಗಂಟೆಗೆ. ಬಾರೇ ಏನಾದ್ರೂ ತಿನ್ಕೊಂಡ್ ಬರೋಣ’ ಅಂತ ಸ್ನೇಹಾ ಕರೆದಾಗ, ಇಬ್ಬರೂ ಕಾಲೇಜು ಪಕ್ಕದಲ್ಲಿರುವ ‘ಹೊಟೇಲ್ ಸುರುಚಿ’ಗೆ ನುಗ್ಗಿದ್ದೆವು. ಹೊಟ್ಟೆ ತುಂಬುವಷ್ಟು ಫ್ರೈಡ್  ರೈಸ್, ನೂಡಲ್ಸ್ ಜೊತೆಗೆ ಕಾಫಿ಼ ಕುಡಿದ ಮೇಲೆ, ವಾಟ್ಸಾಪ್ ತೆರೆದೆ.

            ಯಾವುದೋ ಅಪರಿಚಿತ ನಂಬರಿನಿಂದ  ಮೆಸೇಜು. ಪಟ್ಟನೆ ತೆರೆದೆ.

‘Hi Mithila. This is Partha’  (ಅಯ್ಯೋ ರಾಮ. ಇದು ಅವನೇ. Decent Smile ಹುಡುಗ!!!)

‘ನಿಮ್ ಕಥೆ ತುಂಬಾ ಚೆನ್ನಾಗಿದೆ’  (ಕಥೆ ಬರ್ದಿದಕ್ಕೂ ಸಾರ್ಥಕ!!!)

‘I like it Mithila’   (ಇದರ ಬದಲು ‘ಐ ಲೈಕ್ ಯು’ ಅನ್ನಬಾರ್ದಿತ್ತಾ???)

‘ದಯವಿಟ್ಟು ಬರೆಯೋದನ್ನ ನಿಲ್ಲಿಸ್ಬೇಡಿ’  (ನೀ ಹೇಳಿದ್ಮೇಲೆ ಮುಗೀತು!!)

            ಹೀಗೆಲ್ಲಾ ಅವನ ಮೆಸೇಜುಗಳಿಗೆ ಮನಸ್ಸಿನಲ್ಲಿಯೇ ಉತ್ತರ ಕೊಡುತ್ತಿದ್ದೆ. ಖುಷಿಯಲ್ಲಿ ಭೂಮಿಯಿಂದ ಒಂದಿಂಚು  ಮೇಲೆ ಬಂದಂತಾಗಿತ್ತು.

 ಆದರೆ ಹೇಗೆ ಉತ್ತರ ಕೊಡಲಿ? ಅನ್ನುವುದು ಪ್ರಶ್ನೆಯಾಗಿ ಉಳಿದುಬಿಟ್ಟಿತು.

            ‘ಏನಾದ್ರೂ ಉತ್ತರ ಕೊಡೇ ಮಾರಾಯ್ತಿ. ಇಲ್ಲಾಂದ್ರೆ ಸೊಕ್ಕು ಅನ್ಕೋತಾನೆ. ಅವನಾಗಿಯೇ ಮೆಸೇಜ್ ಮಾಡಿರೋವಾಗ ನಿಂದೇನು ಶೋಕಿ’ ಅಂತ ಮನಸ್ಸು ಜೋರಾಗಿ ಎಚ್ಚರಿಸಿದ ಮೇಲೆ,

‘ಹಾಯ್ ಪಾರ್ಥ. ತುಂಬಾ ಧನ್ಯವಾದಗಳು. ನನ್ನ ಕಥೆಯನ್ನು ಓದಿ ಇಷ್ಟ ಪಟ್ಟಿದ್ದೀರಿ ಅಂದರೆ, ನಿಮಗೆ ಕಥೆ ಓದುವ ಒಳ್ಳೆಯ ಅಭಿರುಚಿ ಇದೆ. ಜೊತೆಗೆ ಹೊಸಬರನ್ನು ಪ್ರೋತ್ಸಾಹಿಸೋ ಗುಣ ಇದೆ. ಥ್ಯಾಂಕ್ ಯೂ ಸೋ ಮಚ್!” ಮನಸ್ಸು ಇನ್ನೊಂದು ಉತ್ತರ ಹೇಳುವ ಮೊದಲು ಸೆಂಡ್ ಮಾಡಿದೆ.

ಏನು ಉತ್ತರ ಬರಬಹುದು? ಮಾತು ಬೆಳೆಯಬಹುದಾ? ಅವನ ಜೊತೆ ಕಾಫಿ಼ ಕುಡಿಯುವ ದಿನ ಹತ್ತಿರ ಇರಬಹುದಾ? ಅಂತೆಲ್ಲಾ ಏನೇನೋ ಯೋಚನೆ ಮಾಡುವ ಮೊದಲೇ ತಕ್ಷಣ ಅತ್ತ ಕಡೆಯಿಂದ ಉತ್ತರ ಬಂತು.

“ಅರೇ, ಇದರಲ್ಲಿ ಹೊಸಬರ ಪ್ರಶ್ನೆ ಎಲ್ಲಿದೆ? ನಾವು ಒಂದು ಕುಟುಂಬ ಇದ್ದ ಹಾಗೆ. ಯಾರೇ ಚೆನ್ನಾಗಿ ಬರೆದ್ರೂ ನಾನಂತು ಮುಕ್ತ ಮನಸ್ಸಿನಿಂದ ಅವ್ರಿಗೆ ಹೇಳಿಬಿಡ್ತೀನಿ.’

‘ನಿನ್ನೆ ಸ್ವಲ್ಪ ಬ್ಯುಸಿ಼ ಇದ್ದೆ. ಈಗ ಕಥೆ ಓದಿದೆ. ಹಾಗಾಗಿ ತಕ್ಷಣ ನಿಮಗೆ ಮೆಸೇಜ್ ಹಾಕಿದೆ. ಏನೂ ತಪ್ಪು ತಿಳ್ಕೋಬೇಡಿ’ ಎಂದು ಇಷ್ಟುದ್ದ ಮೆಸೇಜು ಬಂತು.

(ಅಯ್ಯೋ ರಾಮನೇ.. ನಿನ್ನಂಥ ಚಂದದ ಹುಡುಗ ಮೆಸೇಜು ಮಾಡೋವಾಗ ಯಾವ್ದಾದ್ರೂ ಹುಡ್ಗಿ ತಪ್ಪು ತಿಳ್ಕೋತಾಳೇನೋ)

‘ಅದ್ರಲ್ಲಿ ತಪ್ಪು ತಿಳ್ಕೊಳ್ಳೋದು ಏನಿದೆ ಮಿಸ್ಟರ್ ಪಾರ್ಥ. ನಿಮ್ಮ ಪ್ರೋತ್ಸಾಹದ ಗುಣ ನನಗಿಷ್ಟ ಆಯ್ತು.’

ಒಂದರೆಕ್ಷಣ ತಡೆದು, ಇನ್ನೊಂದು ಮೆಸೇಜು ಹಾಕಿದೆ.

‘ಅಂದ ಹಾಗೆ, ಮೊನ್ನೆಯ ಕಾರ್ಯಕ್ರಮದಲ್ಲಿ ನಿಮ್ಮ ನಿರೂಪಣೆ ಬಹಳ ಚೆನ್ನಾಗಿತ್ತು. ನೀವೂ ಅಷ್ಟೇ, ಇದನ್ನ ಬಿಡಬೇಡಿ. ನನ್ನ ಪುಟ್ಟ ಸಲಹೆ ಇದು’ ಎಂದು ಕಳಿಸಿದೆ.

ಅಷ್ಟರಲ್ಲಿ ಗಂಟೆ 12 ಬಾರಿಸಿತು. ಮುಂದಿನ ಕ್ಲಾಸು ಗೋವಿಂದ ರಾಜು ಸರ್ ಅವರದ್ದು. ‘ಅವರ ಕ್ಲಾಸಿಗೆ ಲೇಟ್ ಆಗಿ ಹೋದ್ರೆ ಅಷ್ಟೇ ಕಥೆ. ಬಾರೇ’ ಎಂದು ಸ್ನೇಹಾ ಕೈ ಹಿಡಿದು ಎಳೆದಾಗ, ಬ್ಯಾಗಿನ ಮೂಲೆಯಲ್ಲಿ ಫೋ಼ನೆಸೆದು ಹೊರಟೆ.


ತಾರೀಕು : 05 ಮಾರ್ಚ್ 2021            ಸಮಯ : ಬೆಳಗ್ಗೆ 06:30

            ನಿನ್ನೆ ಕ್ಲಾಸು, ಅಸೈನ್‌ಮೆಂಟು, ಪ್ರೆಸೆಂಟೇಶನ್ ಅಂತ ನೂರಾರು ತಲೆನೋವುಗಳ ನಡುವೆ ಮೊಬೈಲ್ ಮತ್ತು ಅವನೊಂದಿಗೆ ಆಡಿದ ಮಾತು ನೆನಪೇ ಇರಲಿಲ್ಲ. ನನಗೂ, ಮೊಬೈಲಿಗೂ ಎಣ್ಣೆ ಸೀಗೆಕಾಯಿ ಸಂಬಂಧ.

 ಕೆಲವೊಂದು ಸಲ ಇಡೀ ದಿನ ಸೈಲೆಂಟ್ ಮೋಡಿನಲ್ಲಿಟ್ಟು, ಮನೆಯವರಿಂದ ಬೈಸಿಕೊಂಡಿದ್ದೆ. ಕೆಲವೊಂದು 2-3 ದಿನ ವಾಟ್ಸಾಪ್ ಕಡೆಗೆ ತಿರುಗಿ ನೋಡದಿರುವುದೂ ಇದೆ.

            ಅವತ್ತು ಬೆಳಗ್ಗೆ ಎದ್ದ ಕೂಡಲೇ ಯಾಕೋ ನೆಟ್ ಆನ್ ಮಾಡಿದೆ. ಅಲ್ಲಿ ಅವನದ್ದು ಮೂರು ಮೆಸೇಜಿತ್ತು. ಥಟ್ಟನೆ ನಿನ್ನೆ ನಡೆದ ಮಾತುಕಥೆಯೆಲ್ಲಾ ನೆನಪಿಗೆ ಬಂತು. ಗಡಿಬಿಡಿಯಲ್ಲಿ ಮೆಸೇಜು ಓಪನ್ ಮಾಡಿದೆ. ಎಲ್ಲವೂ ನಿನ್ನೆ ಸಂಜೆ ಕಳಿಸಿದ್ದು.

            ‘ಥ್ಯಾಂಕ್ಯೂ ಮಿಥಿಲಾ. ನಿರೂಪಣೆ ನಂಗೆ ಭಾಳಾ ಇಷ್ಟ. ಎಲ್ಲಿ ಅವಕಾಶ ಸಿಕ್ಕಿದ್ರೂ ಮಾಡ್ತೀನಿ.’

            ‘ಅಂದ ಹಾಗೆ ಯೂ ಕ್ಯಾನ್ ಕಾಲ್ ಮಿ ಪಾರ್ಥ. ಮಿಸ್ಟರ್ ಅನ್ನೋ ಬೇಲಿ ಬೇಡ.’

            ‘ನೀವು ಫೈನಲ್ ಇಯರ್ ಎಂ.ಎಸ್ಸಿ ಬಯೋಟೆಕ್ ಅಲ್ವಾ?’ ಅಂತಿತ್ತು.

‘ಗುಡ್ ಮಾರ್ನಿಂಗ್ ಪಾರ್ಥ. ನಿನ್ನೆ ಕ್ಲಾಸಿಗೆ ಸಂಬಂಧಿಸಿದ್ದು ಒಂದಿಷ್ಟು ಕೆಲಸ ಇತ್ತು. ಹಾಗಾಗಿ ಮೊಬೈಲು ನೋಡರ‍್ಲಿಲ್ಲ. ಹೌದು. ನಾನು ಬಯೋಟೆಕ್ ಸ್ಟೂಡೆಂಟ್’ ಅಂತ ಕಳಿಸಿದೆ.

ಒಂದರೆಕ್ಷಣ ಬಿಟ್ಟು, ‘ಶುಭೋದಯ ಮಿಥಿಲಾ’ಜೊತೆಗೆ ಒಂದು ಹೂವು ಹಾಗೂ ಕಾಫಿ಼ ಕಪ್ಪಿನ ಇಮೋಜಿ ಇತ್ತು. ‘ನೀವು ಬಯೋಟೆಕ್ ಓದ್ತಾ ಇದ್ರೂ ಇಷ್ಟೊಂದು ಸಾಹಿತ್ಯವನ್ನ ಪ್ರೀತಿಸ್ತೀರಲ್ಲಾ. ಹ್ಯಾಪಿ ಫಾರ್ ಯು. ಕೀಪ್ ಗೋಯಿಂಗ್’ ಅಂತಿತ್ತು.

ಏನು ಉತ್ತರ ಕೊಡಲಿ? ಅಂತ ಹತ್ತು ನಿಮಿಷ ಪೇಚಾಡಿದರೂ ಮಾತು ಮುಂದುವರೆಸುವ ವಿಧಾನ ತಿಳಿಯದೆ, ‘ಥ್ಯಾಂಕ್ಸ್’ ಜೊತೆಗೆ ನಗುವ ಇಮೋಜಿ ಕಳುಹಿಸಿದೆ. ಅದನ್ನು ಅವನು ನೋಡಿದರೂ, ಇಡೀ ದಿನ ಮೆಸೇಜು  ಬರಲಿಲ್ಲ.

ಮದ್ಯಾಹ್ನದ ತನಕ ಕಾದು, ಕಾದು ಪೇಚಾಡಿದೆ. ಕೊನೆಗೆ ‘ನನ್ನ ಹಣೆಬರಹಾನೇ ಇಷ್ಟು. ಹೇಗೆ ಮಾತು ಬೆಳೆಸೋದು? ಅಂತ ಕಲ್ತಿದ್ರೆ, ಇಷ್ಟೊತ್ತಿಗೆ ಅವ್ನ ಎಲ್ಲಾ ವಿಷ್ಯ ನಾನೇ ಬಾಯಿ ಬಿಡಿಸ್ತಿದ್ದೆ’ ಎಂದು ಕಾಣದ ಹಣೆಬರಹಕ್ಕೆ ಬೈದುಕೊಂಡೆ.


ತಾರೀಕು : 06 ಮಾರ್ಚ್ 2021            ಸಮಯ : ಬೆಳಗ್ಗೆ 10:00

            ‘ಇವತ್ತು ಸಂಜೆ 05:30ಕ್ಕೆ ಗ್ರೂಪಿನ ಎಲ್ಲಾ ಸದಸ್ಯರು ಹೊಟೇಲ್ ಮಹಾವೀರದಲ್ಲಿ ಸೇರಬೇಕಾಗಿ ವಿನಂತಿ’ ಎಂದು ಅಡ್ಮಿನ್ ಜ್ಯೋತಿ ಮೆಸೇಜು ಹಾಕಿದ್ದಳು. ಅದರ ಕೆಳಗೆ ಗ್ರೂಪಿನ 110 ಸದಸ್ಯರು Ok. Done. Sure ಅಂತೆಲ್ಲಾ ಬಗೆಬಗೆಯ ರಿಪ್ಲೇ ಕೊಟ್ಟಿದ್ದರು. ನಾನೂ ‘ಓಕೆ’ ಎಂದು ಹಾಕಿ, ಕಾಲೇಜಿಗೆ ಹೊರಟೆ.

            ಅಂದು ಸಂಜೆ 05:30ಕ್ಕೆ ಹೊಟೇಲಿಗೆ ತಲುಪಿದಾಗ ಹಿಂದಿನಿಂದ  ಯಾರೋ, ‘ಹಾಯ್ ಮಿಥಿಲಾ’ ಅಂದ ಹಾಗಾಯ್ತು. ಹಿಂತಿರುಗಿದರೆ ನಗುತ್ತಾ ಪಾರ್ಥ ನಿಂತಿದ್ದ. ‘ಹೊಟ್ಟೆಯೊಳಗೆ ಚಿಟ್ಟೇನಾ ಬಿಟ್ಟಂಗಾಯ್ತದೆ’ ಅಂತನ್ನಿಸಿದರೂ, ‘ಹಾಯ್ ಪಾರ್ಥ. ಹೇಗಿದ್ದೀರಾ?’ ಎಂದೆ.

            ‘ಹೇ ಕಮಾನ್. ಹೋಗಿ, ಬನ್ನಿ ಅಂತೆಲ್ಲಾ ಏನಿದು? ಜಸ್ಟ್ ಬಿ ಕ್ಯಾಶುವಲ್’ ಅಂದು ನಗುತ್ತಲೇ. ‘ಸರಿ ಪಾರ್ಥ. ಹೇಗಿದ್ದಿ?’ ಎಂದೆ ನಾನೂ ನಗುತ್ತಲೇ.

            ‘ನಾನು ಆರಾಮಾಗಿದ್ದೀನಿ. ನೀವು?’    

            ‘ನಾನು ಕೂಡಾ. ಎಷ್ಟೊತ್ತಾಯ್ತು ಬಂದು?’

            ‘ನಂಗೆ ಇವತ್ತು ವಾರದ ರಜೆ. ಹಾಗೇ ೫ ಗಂಟೆ ಹೊತ್ತಿಗೇ ಬಂದೆ’

            ‘ಅಂದ  ಹಾಗೇ, ನೀವೆಲ್ಲಿ ಕೆಲಸ ಮಾಡೋದು?’

            ‘ನಾನು ಅಪೋಲೋ ಹಾಸ್ಪಿಟಲ್ ಪಿ.ಆರ್.ಓ ಡಿಪಾರ್ಟ್ಮೆಂಟಲ್ಲಿ ಇರೋದು.’

            ಹಾಗೇ, ಸಾಹಿತ್ಯ, ಆಸ್ಪತ್ರೆ, ಕಾಲೇಜು, ನೆಚ್ಚಿನ ಪುಸ್ತಕ ಅಂತೆಲ್ಲಾ ಮಾತು ಶುರುವಾಗಿ, ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ನಮ್ಮ ಹವ್ಯಾಸಗಳ ಬಗ್ಗೆ ಚರ್ಚೆ ಮಾಡಿಯಾಗಿತ್ತು. ಹೆಚ್ಚಾಗಿ ನಮ್ಮ ಹವ್ಯಾಸಗಳು ಒಂದೇ ರೀತಿಯದ್ದಾಗಿತ್ತು.

            ಅಷ್ಟರಲ್ಲಿ ಜ್ಯೋತಿ ಮತ್ತು ಗ್ರೂಪಿನ ಮತ್ತೊಬ್ಬ ಸದಸ್ಯೆ ಕಿರಣಾ, ಮುಂದಿನ ವಾರಕ್ಕೆ ಕೆಲವು ಯೋಜನೆಗಳನ್ನು ತಿಳಿಸಿದರು. ಕುಗ್ರಾಮದ ಒಂದು ಹಳ್ಳಿಯ ಶಾಲೆಯಲ್ಲಿ ಕನ್ನಡ ಪಾಠ ಮಾಡುವುದು ಮುಂದಿನ ಯೋಜನೆಯಾಗಿತ್ತು. ಅದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಮಾಡಿಕೊಂಡು, ಪಾರ್ಥನಿಗೆ ಬಾಯ್ ಹೇಳಿ ರೂಮಿಗೆ ಬಂದೆ.


ತಾರೀಕು : 08 ಮಾರ್ಚ್ 2021            ಸಮಯ : ಬೆಳಗ್ಗೆ 10:00

            ಅವತ್ತು ನಾವು ಶಾಲೆಯಲ್ಲಿ ಪಾಠ ಮಾಡುವ ದಿನ. ಅದೃಷ್ಟವೆಂಬಂತೆ  ನನಗೂ, ಪಾರ್ಥನಿಗೂ 5ನೇ ಕ್ಲಾಸಿಗೆ ಜೊತೆಗೆ ಪಾಠ ಮಾಡುವ ಅವಕಾಶ ಸಿಕ್ಕಿತು. ಇಬ್ಬರ ಕನ್ನಡ ಭಾಷೆ, ನಿರೂಪಣೆ, ವಿವರಣೆ ಚೆನ್ನಾಗಿ ಇದ್ದುದರಿಂದ ಮಕ್ಕಳೆಲ್ಲಾ ಇಷ್ಟಪಟ್ಟರು. ನಮಗಿಬ್ಬರಿಗೂ ಖುಷಿಯಾಯಿತು.

            ಅವತ್ತು ಶನಿವಾರವಾಗಿದ್ದರಿಂದ, ಪಾಠ ಮುಗಿಸಿದ ಮೇಲೆ, ಎಲ್ಲಾ ಮಕ್ಕಳನ್ನು ಶಾಲೆಯ ಆವರಣದಲ್ಲಿದ್ದ ದೊಡ್ಡ ಮರದ ಕೆಳಗೆ ಕೂರಿಸಿ, ಅವರಿಗಾಗಿ ಆಶು ಭಾಷಣ, ಅಭಿನಯ ಗೀತೆ ಮುಂತಾದ ಚಿಕ್ಕ ಸ್ಪರ್ಧೆಯನ್ನು ಏರ್ಪಡಿಸಿದ್ದೆವು. ಇದಕ್ಕಾಗಿ ನಿನ್ನೆ ಸುಮಾರು 2 ಗಂಟೆ ಸಂಭಾಷಣೆ ನಡೆಸಿದ್ದೆವು. ಅದು ಫಲಪ್ರದವಾಗಿದ್ದು ಇಬ್ಬರಿಗೂ ಖುಷಿಯಾಗಿತ್ತು.

            ಶಾಲೆಯಿಂದ ಹೊರಡುವ ಮುನ್ನ, ‘ನಾಳೆ ಹೇಗೂ ಸಂಡೇ. ನೀನು ಫ್ರೀ ಇರ್ತೀಯಾ ಅಲ್ವಾ? ಸಿಗೋಣ್ವಾ?’ ಅಂತ ಕೇಳಿದ. ಮೀನಾ ಮೇಷ ಎಣಿಸದೆ, ‘ಪಕ್ಕಾ ಬರ್ತೀನಿ’ ಅಂದೆ.

            ಅವತ್ತು ರಾತ್ರಿ 12 ಗಂಟೆ ತನಕ ಚರ್ಚೆ ಮಾಡಿದ ಮೇಲೆ, ಸಿಗುವ ಜಾಗ ಯಾವುದೆಂದು ನಿಗದಿಯಾಯಿತು. ಅದು ಎಲ್.ಎಸ್. ಪಾರ್ಕ್.


ಇದನ್ನೂ ಓದಿ : ಅವನೋ... ಇಲ್ಲ, ಇವನೋ...


ತಾರೀಕು : 09 ಮಾರ್ಚ್ 2021            ಸಮಯ : ಬೆಳಗ್ಗೆ 11:00

            ಆದಿತ್ಯವಾರ ಪೂರ್ತಿ ದಿನ ಪಾರ್ಥನೊಂದಿಗೆ ಮಾತುಕಥೆ. ಸಾಹಿತ್ಯ. ಕಥೆ. ಕವನ. ಜೀವನ. ಎಲ್ಲವೂ.

            ಆ ಹುಡುಗ ಬಹಳ ಇಷ್ಟವಾಗಿಬಿಟ್ಟ. ಮತ್ತಷ್ಟು ಇಷ್ಟವಾದ!


ತಾರೀಕು : 10 ಮಾರ್ಚ್ 2021            ಸಮಯ : ಸಂಜೆ 06:00

            ಅವತ್ತು ನಮ್ಮ ಗ್ರೂಪಿನ ಸದಸ್ಯರ ಜೊತೆ ಮೊನ್ನೆ ನಡೆದ ಕಾರ್ಯಕ್ರಮದ ಬಗ್ಗೆ ಚರ್ಚೆ ಇತ್ತು. ಎಲ್ಲರ ಬಾಯಲ್ಲೂ ನಮ್ಮಿಬ್ಬರದ್ದೇ ಮಾತು. ನಮ್ಮ ಪಾಠ, ಆಟವನ್ನು ಎಲ್ಲರೂ ಹೊಗಳಿದವರೇ! ‘ಪಾರ್ಥ ಮತ್ತು ಮಿಥಿಲಾ. ಯೂ ಆರ್ ಜಸ್ಟ್ ಪರ್ಫೆಕ್ಟ್!’ ಅಂತ ಜ್ಯೋತಿ ಹೇಳಿದಾಗ, ಉಳಿದವರೆಲ್ಲಾ ಚಪ್ಪಾಳೆ ತಟ್ಟಿದಾಗ ನಮಗೆ ಒಳಗೊಳಗೇ ಪುಳಕ.


ತಾರೀಕು : 11 ಮಾರ್ಚ್ 2021ರಿಂದ 18 ಮಾರ್ಚ್ 2021       ಸಮಯ : ಬೆಳಗ್ಗೆ 06:00 ರಿಂದ 12:00

            ಆ ವಾರ ಪೂರ್ತಿ ನಾವು ಮಾತಾಡಿದಷ್ಟು ಮಾತು ಬೆಳೆಯುತ್ತಲೇ ಇತ್ತು.

            ನನಗಂತೂ ಮೊದಲ ಪ್ರೀತಿಯ ಪುಳಕ.

ಪಾರ್ಥ ಕ್ಷಣಕ್ಷಣಕ್ಕೂ ಅಮಲೇರಿಸುವಂತೆ ಇಷ್ಟವಾಗುತ್ತಲೇ ಹೋದ.

ಮೊಬೈಲನ್ನು ಹಸುಗೂಸಿನಂತೆ ಮಗ್ಗಲಿನಲ್ಲಿಯೇ ಇರಿಸಿಕೊಂಡ ನನ್ನನ್ನು ನೋಡಿ ಎಲ್ಲರಿಗೂ ಆಶ್ಚರ್ಯ. ಅವರಿಗೆಲ್ಲಾ ಅನುಮಾನ ಬಂದರೂ ಯಾರೂ ಕೇಳುವ ಧೈರ್ಯ ಮಾಡಲಿಲ್ಲ.


ತಾರೀಕು : 19 ಮಾರ್ಚ್ 2021            ಸಮಯ : ರಾತ್ರಿ 10:45

            ದಿನವೂ ಮಾತನಾಡಿದಂತೆ ಆ ದಿನವೂ ವಾಟ್ಸಾಪಿನಲ್ಲಿ ಮಾತುಕಥೆ ಸಾಗುತ್ತಿತ್ತು. ಆದರೆ ಇದು ನನ್ನ ಪಾಲಿಗೆ ಸುಲಭವಾಗಿರಲಿಲ್ಲ. ನಾನವತ್ತು ಪಾರ್ಥನಿಗೆ ನನ್ನ ಮನದ ಭಾವನೆಗಳನ್ನು ಅರಹಲು ಕಾಯುತ್ತಿರುವ ಹೊತ್ತು.

           ಅವನ ಬಾಲ್ಯದ ಕಥೆಗಳನ್ನು ಹೇಳುತ್ತಾ ಇದ್ದುದರಿಂದ ನಾನು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ. ಕೊನೆಗೆ ಮಾತು ಮುಗಿಸಿದ ಅವನು, ‘ಬೇರೇನು ಸಮಾಚಾರ ಮಿಥಿಲಾ?’ ಎಂದು ಆತ್ಮೀಯವಾಗಿ ಕೇಳಿದ.

            ಕೊನೆಗೂ. ಕೊನೆಗೂ ಸರಿಯಾದ ಸಮಯ ಬಂದಿತು. ಬಂದೇ ಬಿಟ್ಟಿತು, ಇದೇ ಸರಿ. ಈಗಲೇ ಹೇಳಬೇಕು.

            ಆಗ ಗಂಟೆ ಸರಿಯಾಗಿ 11:00.

ನನ್ನ ಮನದಲ್ಲಿ ಮುದ್ದೆಯಾಗಿ ಕೂತಿದ್ದ ಭಾವನೆಗಳಿಗೆಲ್ಲಾ ಮೂರ್ತ ರೂಪ ಕೊಡಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿ, 2 ದಿನದ ಹಿಂದೆ ಅವನಿಗಾಗಿ ಬರೆದಿಟ್ಟಿದ್ದ ಸಾಲುಗಳನ್ನು ಕಳುಹಿಸಿದೆ.

ಕಳುಹಿಸಿದ ಮರುಕ್ಷಣವೇ ಬ್ಲೂ ಟಿಕ್ ಬಂತು. ನನ್ನ ಎದೆ ಬಡಿತ ನನ್ನ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಯಾವಾಗಲೂ ಕ್ಷಣದಲ್ಲಿ ಬರುತ್ತಿದ್ದ ಉತ್ತರ,  ಒಂದು ನಿಮಿಷವಾದರೂ ಬರಲಿಲ್ಲ.

ಎದೆ ಬಡಿತ ಇನ್ನೂ ಹೆಚ್ಚಾಗಿ ಬೆವರಲು ಆರಂಭಿಸಿದೆ. ಒಂದೊಂದು ನಿಮಿಷವೂ ಒಂದೊಂದು ಯುಗದಂತೆ ಭಾಸವಾಯಿತು. ಗಂಟೆ 11:05 ಆದರೂ ಅವನ ಉತ್ತರವಿಲ್ಲ.

ಸುಮಾರು ಹತ್ತು ನಿಮಿಷ ಕಾದರೂ ಯಾವುದೇ ಉತ್ತರ ಬರಲಿಲ್ಲ. ಕೊನೆಗೆ ಸೋತು ಸುಣ್ಣಾಗಿ, ಕಣ್ತುಂಬಾ ನೀರು ತುಂಬಿಕೊಂಡಿತು. ಮನಸಿಗೆ ಯೋಚಿಸಲು ಅವಕಾಶವನ್ನೇ ಕೊಡದಂತೆ, ಕಣ್ಣುಗಳು ಒಂದೇ ಮನೆ ಅತ್ತವು. ಕಷ್ಟಪಟ್ಟು ಕಣ್ಮುಚ್ಚಿ ಬಾರದ ನಿದ್ರೆಯನ್ನು ಎಳೆಯಲು ಪ್ರಯತ್ನಿಸಿದೆ.


ತಾರೀಕು : 20 ಮಾರ್ಚ್  2021           ಸಮಯ : ಬೆಳಗ್ಗೆ 06:30

            ಯಾವಾಗ ನಿದ್ದೆ ಬಂತೋ? ನನಗೇ ತಿಳಿಯಲಿಲ್ಲ. ಕಣ್ಣು ಬಿಡಲು ಮನಸಾಗಲಿಲ್ಲ. ಪಾರ್ಥ. ಅವನಿಗೆ ಕಳುಹಿಸಿದ್ದ ಮೆಸೇಜು. ಎಲ್ಲವೂ ನೆನಪಾಯ್ತು. ಆದರೆ ಮೆಸೇಜು ತೆರೆದು ನೋಡುವ ಧೈರ್ಯವಾಗಲಿಲ್ಲ.

            ಆಗಲೇ ನನ್ನ ರೂಮ್‌ಮೇಟ್ಸ್‌ಗಳು ಜೋರಾಗಿ ಮಾತನಾಡುತ್ತಿರುವುದು ಕೇಳಿಸಿತು. ಏನೆಂದು ಕಿವಿಕೊಟ್ಟೆ. ಶುಭಾ, ಸುದ್ದಿಯೊಂದನ್ನು ಜೋರಾಗಿ ಓದುತ್ತಿದ್ದಳು;

“ನಿನ್ನೆ ರಾತ್ರಿ ಸುಮಾರು  40 ನಿಮಿಷಗಳ ಕಾಲ ಸ್ಥಗಿತಗೊಂಡ ವಾಟ್ಸಾಪ್. ರಾತ್ರಿ 11 ರಿಂದ ಸುಮಾರು 40 ನಿಮಿಷಗಳ ಕಾಲ ಜಗತ್ತಿನಾದ್ಯಂತ ವಾಟ್ಸಾಪ್ ಸರ್ವರ್ ಸ್ಥಗಿತಗೊಂಡಿತ್ತು.”

            ಮುಂದಿನದ್ದೆಲ್ಲಾ ನನಗೆ ಅಸ್ಪಷ್ಟವಾಗಿ ಕೇಳಿಸಿತು... 


ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


ಪ್ರಚಲಿತ ಪೋಸ್ಟ್‌ಗಳು