ಮಿಂಚಾಗಿ ಬಂದ ಹುಡುಗ...
ಬಸ್ಸಿನಲ್ಲಿ ಪಕ್ಕ ಕೂತವನು ಮುಂಗುರುಳು ಸರಿಸುವಾಗ ಅವನು ನೆನಪಾದ.
ಅವನ ಕೂದಲು ರೇಷ್ಮೆಯಂತೆ.. ಬರೀ ಹುಡುಗಿಯರ ಕೂದಲನ್ನು ಮಾತ್ರವೇಕೆ ರೇಷ್ಮೆಗೆ ಹೋಲಿಸಬೇಕು? ನನ್ನವನ ಕೂದಲು ರೇಷ್ಮೆಯಂತೆ ಇತ್ತು!.
ಪಕ್ಕದಲ್ಲಿ ಕೂತ ಹುಡುಗನ ಕೂದಲು ಅವನ ಮಾತನ್ನು ಕೇಳುತ್ತಲೇ ಇರಲಿಲ್ಲ. ನಾನು ತಕ್ಷಣ ಕಿಟಕಿ ಹಾಕಿದೆ. ಮುಗುಳ್ನಕ್ಕು 'ಥ್ಯಾಂಕ್ಸ್' ಅಂದ.
ಖರೆ ಹೇಳುವೆ, ನಕ್ಕಾಗ ಅವನು ಒಂಚೂರೂ ಚಂದ ಕಾಣಲಿಲ್ಲ. ನಾನು ಕಿಟಕಿ ಹಾಕಿದ್ದೇ ತಪ್ಪಾಯ್ತು ಅನ್ನಿಸಿತು. ಏನು ಮಾಡೋದು? ಸಣ್ಣದೊಂದು ಸಹಾಯ ಮಾಡಿ ಹೀರೋಯಿನ್ ಆಗಿದ್ದೇನೆ. ಅದನ್ನು ಕೆಡಿಸಿಕೊಳ್ಳುವುದು ಬೇಡವೆಂದು ಸುಮ್ಮನೆ ಕುಳಿತೆ.
ಅವನನ್ನು ಓರೆ ಕಣ್ಣುಗಳಿಂದ ಗಮನಿಸುತ್ತಲೇ ಇದ್ದೆ. ನಿಮಿಷಕ್ಕೆ ಹತ್ತು ಬಾರಿ ಕೂದಲು ಸರಿ ಮಾಡಿಕೊಳ್ಳುವುದು, ಆಗಾಗ ಫೋನಿನಲ್ಲಿ ಸುಂದರ (?) ಮುಖ ನೋಡಿಕೊಳ್ಳುವುದು, ಅವನು ಇಳಿಯುವ ಜಾಗ ಬಂತಾ? ಎಂದು ಬಸ್ಸು ನಿಂತಾಗಲೆಲ್ಲಾ ಕಿಟಕಿಯಿಂದ ಹೊರನೋಡುವುದು, ಇಷ್ಟೇ!
ಇದನ್ನೂ ಓದಿ : ಗುಟ್ಟಾಗಿ ಉಳಿದ ಕಾರಣ...
ಅವನ ಪೀಕಲಾಟ ನೋಡಲಾಗದೆ 'ನೀವು ಎಲ್ಲಿ ಇಳಿಯೋದು ಹೇಳಿ. ನನಗೆ ಇಲ್ಲಿ ಎಲ್ಲಾ ಸ್ಟಾಪು ಗೊತ್ತು. ನಾನೇ ಹೇಳ್ತೀನಿ' ಎಂದೆ. ಅವನು ಇಳಿಯುವ ಜಾಗ ಹೇಳಿದ. ಅದು ಇನ್ನೂ ಅರ್ಧ ಗಂಟೆ ದೂರವಿದೆಯೆಂದು ಹೇಳಿದೆ. ನಿಶ್ಚಿಂತೆಯಿಂದ ಕುಳಿತ. ಇನ್ನೊಂದು ಬಾರಿ ಹೀರೋಯಿನ್ ಆದ ಖುಷಿಯಲ್ಲಿ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಕುಳಿತೆ.
ನನ್ನ ಕೈಯ್ಯಲ್ಲಿ ಇಯರ್ ಫೋನ್ ಬಾಳಿಕೆ ಬರುವುದು ತೀರಾ ಕಮ್ಮಿ. ಇದು ಕೂಡ ಕೈ ಕೊಟ್ಟಿದ್ದು ನನಗೆ ಗೊತ್ತೇ ಇರಲಿಲ್ಲ. ನಾನು ತನ್ಮಯಳಾಗಿ ಕೇಳುತ್ತಿದ್ದ 'ಮಿಂಚಾಗಿ ನೀನು ಬರಲು' ಅವನ ಕಿವಿಗೂ ಬೀಳುತ್ತಿತ್ತು.
ಅವನು ಬೆರಳ ತುದಿಯಿಂದ ನನ್ನ ಭುಜವನ್ನು ಮುಟ್ಟಿದ. ನಾನು ತನ್ಮಯತೆಯಿಂದ ತಟ್ಟನೆ ಹೊರಬಂದು 'ಏನು?' ಎಂದು ಕಣ್ಣಿನಲ್ಲೇ ಕೇಳಿದೆ. 'ಇದು ನನ್ನ ಫೇವರೆಟ್ ಸಾಂಗ್ ಕಣ್ರೀ. ಎಷ್ಟು ಸಲ ಬೇಕಾದ್ರೂ ಕೇಳ್ತೀನಿ' ಅಂದ. ನಾನು ಉತ್ತರ ಕೊಡುವ ಮೊದಲೇ, 'ನಿಮಗೂ ಭಾಳ ಇಷ್ಟ ಅನ್ಸುತ್ತೆ' ಅಂದ ಮತ್ತೊಮ್ಮೆ. ನಗುತ್ತಾ ಕೇಳಿದ.
ಮತ್ತೊಮ್ಮೆ ಖರೆ ಹೇಳುವೆ. ಅವನು ಈಗ ನಕ್ಕಾಗಲೂ ಚಂದ ಕಾಣುತ್ತಲೇ ಇರಲಿಲ್ಲ. ಆದರೂ 'ನನಗಂತೂ ಈ ಹಾಡು ಅಂದ್ರೆ ಪಂಚಪ್ರಾಣ' ಎಂದೆ ಮನಸಿನ ಮಾತನ್ನು ಅದುಮಿಡಲಾಗದೆ.
![]() |
| Picture credit : Internet |
ನನ್ನ ಹುಡುಗ ನನಗಾಗಿ ಈ ಹಾಡನ್ನೇ ಹಾಡುತ್ತಿದ್ದ. ಆದರೀಗ ಇದೇ ಹಾಡನ್ನು ಬೇರೆ ಯಾವುದೋ ಹುಡುಗಿಯ ಮುಂದೆ ಹಾಡುತ್ತಿದ್ದಾನೆ. ಅವನು ಬೇರೆ ಹುಡುಗಿಯ ಹಿಂದೆ ಅಂಡಲೆಯುತ್ತಿರುವಾಗ ನನ್ನ ಹುಡುಗ ಹೇಗಾದಾನು? ನಿಮಗೇನು ಅನ್ನಿಸುತ್ತದೆ? ಎಂದು ಕೇಳುವ ಅಂತನಿಸಿತು. ಆ ರೇಷ್ಮೆಯಂತಹ ಕೂದಲಿನ ಹುಡುಗ, ಬೆಕ್ಕಿನ ಕಣ್ಣಿನ, ಅಷ್ಟೇನೂ ಚಂದವಲ್ಲದ ನಗುವಿನ ಹುಡುಗನ ಹತ್ತಿರ ಇದನ್ನೆಲ್ಲಾ ಹೇಳಬೇಕು ಅಂತ ತೀವ್ರವಾಗಿ ಅನ್ನಿಸಿಬಿಟ್ಟಿತು.
ಹೇಗೆ ಹೇಳಬಹುದು? ಅಂತ ಒಳಗೊಳಗೇ ಯೋಚಿಸುತ್ತಲೇ ಕಿಟಕಿಯನ್ನು ಸ್ವಲ್ಪವೇ ಸರಿಸಿದೆ. ೧೦೦ ಮೀಟರ್ ಅಂತರದಲ್ಲಿ ಅವನಿಳಿಯುವ ಜಾಗದ ಊರಿನ ಬೋರ್ಡು ಕಣ್ಣಿಗೆ ರಾಚಿತು.
ಇನ್ನೇನು ನನ್ನ ಬಳಿ ಸಮಯವೇ ಇರಲಿಲ್ಲ. ಒಡಲಿನಲ್ಲಿ ಉಳಿದುಹೋದ ಮಾತುಗಳನ್ನು ಈ ಅಪರಿಚಿತನ ಬಳಿಯಾದರೂ ಹಂಚಿಕೊಳ್ಳುವ ಆತುರದಲ್ಲಿ ನಾನಿದ್ದೆ. ಅವನು ಇನ್ನೆರಡು ದಿನ ನನ್ನ ಬಗ್ಗೆ, ನನ್ನ ಭಗ್ನ ಪ್ರೇಮ ಕಥೆಯ ಬಗ್ಗೆ ಯೋಚಿಸಬಹುದು. ಆಮೇಲೆ ನನ್ನ ಅಸ್ತಿತ್ವವನ್ನೇ ಮರೆತುಬಿಡುತ್ತಾನೆ. ಪರಿಚಯಸ್ಥರೊಂದಿಗೆ ಹೇಳಿಕೊಂಡರೆ ಇದನ್ನೇ ಗುಲ್ಲು ಮಾಡಿಯಾರು!
ಹೌದು. ನನ್ನ ಕಳೆದುಹೋದ ಕಥೆಗಳಿಗೆ ಕಿವಿಯಾಗಲು ಇವನೇ ಸರಿ.
ಥಟ್ಟನೆ ಅವನೆಡೆಗೆ ತಿರುಗಿದವಳೇ ತುಸು ಜೋರಾಗಿಯೇ ಹೇಳಿದೆ…
'ಮಿಸ್ಟರ್, ನಿಮ್ಮ ಸ್ಟಾಪು ಬಂತು'.
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


