ಗುಟ್ಟಾಗಿ ಉಳಿದ ಕಾರಣ...
“ಬದನೆಕಾಯಿ ಕೆಜಿಗೆಷ್ಟು?”
“೫೦ ರೂಪಾಯಿ ಸಾರ್. ಯಾಕಂದ್ರೆ ಮಾರ್ಕೆಟ್ಟಲ್ಲಿ..”
“ನಾನು ಯಾಕಂತ ಕೇಳಿದ್ನಾ? ೧ ಕೆಜಿ ಹಾಕು”
“ಅಲ್ಲಾ ಸಾರ್, 'ಯಾಕಿಷ್ಟೊಂದ್ ರೇಟು? ಆ ಪಾಪಣ್ಣ ಗಾಡೀಲಿ ವಾರಕ್ಕೊಂದ್ಸಲ ಬರ‍್ತಾನೆ. ಅವ್ನ್ ಹತ್ರ ರೇಟು ಕಮ್ಮಿ ಇರುತ್ತೆ. ನೀನ್ ಮಾತ್ರ ಯರ‍್ರಾಬಿರ‍್ರಿ ರೇಟ್ ಹೇಳ್ತೀಯಲ್ಲಾ?' ಅಂತ ಈ ಕೇರೀಲಿರೋ ಹೆಂಗುಸ್ರೆಲ್ಲಾ ಕೇಳ್ತಾರೆ ಸಾರ್. ಅವ್ರಿಗೆ ಹೇಳಿ ಹೇಳಿ ಅಭ್ಯಾಸ ಆಗ್ಬಿಟ್ಟಿದೆ, ಹಿಹ್ಹಿಹ್ಹಿ..” ಎಂದು ಕಿಸಿದ ಸುರೇಶ, ತಲೆ ಕೆರೆದುಕೊಳ್ಳುತ್ತಾ.
“ಆಯ್ತ್ ಆಯ್ತು. ನಿನ್ ಅಜ್ಜಿ ಕಥೆ ಎಲ್ಲಾ ನನ್ ಹತ್ರ ಹೇಳ್ಬೇಡ. ಕಿಸ್ಕೊಂಡ್ ನಿಂತ್ಕಳಕ್ಕೆ ಪುರ್ಸೊತ್ತಿಲ್ಲ ನಂಗೆ. ಬೇಗ ಒಂದರ್ಧ ಕೆಜಿ ತೊಂಡೆಕಾಯಿ, ಆಲೂಗಡ್ಡೆ ಹಂಗೆ ಈರುಳ್ಳೀನೂ ಹಾಕ್ಬಿಡು. ಹಂಗೆ ಎಷ್ಟಾಯ್ತು ಹೇಳು” ಅಂತ ಮಾತು ಮತ್ತು ವ್ಯವಹಾರ ಮುಗಿಸುವ ಅವಸರ ತೋರಿಸಿದೆ.
ಐದೇ ನಿಮಿಷದಲ್ಲಿ ಎಲ್ಲವನ್ನೂ ತೂಗು ಹಾಕಿ, ‘೨೦೦ ರೂಪಾಯಿ ಆಯ್ತು ಸಾರ್’ ಅಂದ. ’೧೦ ರೂಪಾಯಿ ಕಮ್ಮಿ ಮಾಡಿದೀನಿ. ನೀವ್ ನಮ್ಮೋರೇ ಅಲ್ವಾ’ ಅಂದವನೇ ಆತ್ಮೀಯ ನಗು ಬೀರಿ ಹೊರಟ. ಮರು ಮಾತಾಡದೆ ೨೦೦ ರೂಪಾಯಿ ಕೊಟ್ಟು ಚೀಲ ಹಿಡಿದು ಮಹಡಿ ಮೇಲಿರುವ ನನ್ನ ಮನೆಗೆ ಹೊರಟೆ.
ಸುರೇಶನಿಗೆ ನಾನೆಂದರೆ ತುಸು ಗೌರವ, ಚೌಕಾಸಿಯಿಲ್ಲದ ವ್ಯಾಪಾರ ಮಾಡುತ್ತೇನೆಂದು. ಪ್ರತಿಯೊಂದಕ್ಕೂ ಚೌಕಾಸಿ ಮಾಡುವ ನಮ್ಮ ಪಕ್ಕದ ಮನೆಯ ಆರತಿಯೆಂದರೆ ಅವನಿಗೆ ಭಯ. ‘ಆವಮ್ಮ ಒಳ್ಳೆ, ಎಲ್ಲಾದಕ್ಕೂ ಚೌಕಾಸಿ ಮಾಡ್ತಾಳೆ. ನಾನೇದಾದ್ರೂ ಸ್ವಲ್ಪ ಬಗ್ಬಿಟ್ರೆ ನಾಳೆಯಿಂದ ಫ್ರೀಯಾಗಿ ಕೊಡು ಅಂತಾಳೆ’ ಹೀಗಂತ ಸಾಕಷ್ಟು ಬಾರಿ ಅವನು ನನ್ನ ಬಳಿ ಹೇಳಿದ್ದ.
ನನಗೆ ಇಂತಹ ಸಂಭಾಷಣೆಗಳೆಂದರೆ ಅಲರ್ಜಿ. ಆದರೂ ಅವನ ವ್ಯವಹಾರದ ಕೌಶಲ್ಯತೆಗೆ, ಮಾತಿನ ಮೋಡಿಗೆ ಮತ್ತು ಸಲಿಗೆ ಇದ್ದುದರಿಂದ ಅವನ ಮಾತಿಗೆ ಸಣ್ಣದಾಗಿ ‘ಹೂಂ’ ಅನ್ನುತ್ತಿದ್ದೆ.
ನಾನು ಕೇಳಿಸಿಕೊಳ್ಳುತ್ತೇನೆಯೋ, ಇಲ್ಲವೋ ಎಂಬುದು ಅವನಿಗೆ ಬೇಕಾಗಿಯೇ ಇರಲಿಲ್ಲ. ಅವನ ಬಳಿ ತರಕಾರಿ ಖರೀದಿಸಲು ಬರುವ ಚೌಕಾಸಿ ಆಂಟಿಯರ ಕಥೆಯನ್ನು ಕೇಳಲು ಎರಡು ಕಿವಿ ಬೇಕಾಗಿತ್ತು, ಅಷ್ಟೇ! ಅಪ್ಪಿ ತಪ್ಪಿಯೂ ಅವನು ಈ ಕಥೆಗಳನ್ನು ಕೇರಿಯ ಹೆಂಗಸರ ಬಳಿ ಹೇಳುತ್ತಿರಲಿಲ್ಲ. ಹೇಳಿದರೆ ಅದರಿಂದಾಗುವ ಪರಿಣಾಮದ ಅರಿವು ಅವನಿಗಿತ್ತು.
ಮೂರು ಮತ್ತೊಂದು ತರಕಾರಿ ಇರುವ ಚೀಲವನ್ನು ಹೊತ್ತುಕೊಂಡು ತುಸು ಬಿರುಸಾಗಿಯೇ ಮೆಟ್ಟಿಲು ಹತ್ತುತ್ತಿದ್ದೆ. ಭಯಂಕರ ಹಸಿವಾಗಿತ್ತು. ಮನಸಿನ ಶಾಂತಿ ಅರ್ಧ ಹಾರಿ ಹೋಗಿತ್ತು. ನಾದಿದ ಚಪಾತಿ ಹಿಟ್ಟು ಫ್ರಿಡ್ಜ್ ಅಲ್ಲಿತ್ತು. ತುಂಬಿದ ಮೈಕಟ್ಟಿನ ಬದನೆಕಾಯಿಯನ್ನು ನೋಡಿದ ಕೂಡಲೇ ಅಮ್ಮ ಮಾಡುತ್ತಿದ್ದ ಎಣ್ಣೆಗಾಯಿಯ ನೆನಪಾಗಿ, ‘ಇವತ್ತಾದ್ರೂ ಮಾಡಣ. ಹೇಗೂ ರಜೆ’ ಅಂತ ಮನಸ್ಸಿನಲ್ಲಿಯೇ ಯೋಜನೆ ಹಾಕುತ್ತಿದ್ದೆ.
ಮೃದುವಾದ ಚಪಾತಿ ಹಾಗೂ ರುಚಿಕರ ಎಣ್ಣೆಗಾಯಿಯನ್ನು ನೆನೆಸಿಕೊಂಡು ಹೆಜ್ಜೆ ಹಾಕುತ್ತಿರುವಾಗಲೇ, ಎದುರಿಗೆ ನಮ್ಮ ಎದುರು ಮನೆಯ ಕೋಕಿಲಾ ಆಂಟಿ ಪ್ರತ್ಯಕ್ಷವಾದರು.
“ಏನಪ್ಪಾ ಸಂಪತ್ತು, ನಿನ್ ಹೆಂಡ್ತಿ ಬಂದಿಲ್ವಾ ಇನ್ನೂ?” ಎಂದು ಪ್ರಶ್ನೆ ತೂರಿದಾಗ ನನಗಿದ್ದ ಅಲ್ಪ ಮನಶ್ಶಾಂತಿಯೂ ಹಾರಿ ಹೋಗಿ, “ಅಯ್ಯೋ, ನಮ್ ಸಂಸಾರ, ನಮ್ ಗೋಳು. ನಿಮಗ್ಯಾಕೆ ಆ ಚಿಂತೆ?” ದನಿಯೆತ್ತರಿಸಿ ಕೇಳಿಬಿಟ್ಟೆ.
“ವಯಸ್ಸಲ್ಲಿ ನಿನಗಿಂತ ದೊಡ್ಡೋಳು. ಏನೋ ಸ್ವಲ್ಪ ಬುದ್ಧಿ ಹೇಳಣಾ ಅಂತ ಕೇಳ್ದೆ. ನಿನ್ ಸಂಸಾರ ನೀನೇ ನೋಡ್ಕ” ಅಂತ ಅವರೂ ದನಿಯೆತ್ತರಿಸಿ ಬಿಟ್ಟರು. ನಮ್ಮಿಬ್ಬರ ದನಿಗೆ ಅಕ್ಕ ಪಕ್ಕದ ೩ ಮನೆಯ ಬಾಗಿಲುಗಳು ತೆರೆದುಕೊಂಡವು.
“ಸಂಸಾರ ಗಾಜಿನ ಚೂರು ಇದ್ದಂಗೆ. ಒಂದ್ಸಲ ಮುರ‍್ದೋದ್ರೆ ಜೋಡ್ಸಕ್ಕೆ ಆಗಲ್ಲ, ತಿಳ್ಕ” ಎಂದು ಕೋಕಿಲಾ ಆಂಟಿ ಉಪದೇಶಿಸಿ, ಬಿರಬಿರನೆ ಮೆಟ್ಟಿಲಿಳಿದು ಹೋದರು. ಉಳಿದವರಿಗೆ ನಡೆದುದರ ಅರಿವಾಗಿ ಬಾಗಿಲು ಮುಚ್ಚಿಕೊಂಡರು.
ಮನೆಗೆ ತಲುಪಿದವನೇ ದಢಾರ್ ಎಂದು ಬಾಗಿಲು ಹಾಕಿ, ಬಚ್ಚಲು ಮನೆಗೆ ಹೆಚ್ಚು ಕಮ್ಮಿ ಓಡಿ ಹೋಗಿ, ನಲ್ಲಿ ಅಲ್ಲಿ ರಭಸವಾಗಿ ನೀರು ಬಿಟ್ಟು, ನನ್ನೆರಡು ಕಣ್ಣುಗಳಿಗೆ ಮನಸೋ ಇಚ್ಛೆ ಅಳಲು ಅವಕಾಶ ಕೊಟ್ಟೆ.
ಒಂದೆಡೆ ಭಯಂಕರ ಹಸಿವು, ಮತ್ತೊಂದು ಕಡೆ ತಡೆಯಲಾಗದ ಅಳು. ಸುಮಾರು ಅರ್ಧ ಗಂಟೆ ಅತ್ತ ಮೇಲೆ ಕಣ್ಣೀರು ಮುಗಿಯಿತೇನೋ ಅಂದುಕೊಂಡು ಹೊರಬಂದೆ.
ಹಸಿವಿನಿಂದ ತಲೆ ನೋಯುತ್ತಿತ್ತು. ಚಪಾತಿ – ಎಣ್ಣೆಗಾಯಿ ಮಾಡುವ ತಾಳ್ಮೆಯಿಲ್ಲದೆ, ರಾತ್ರಿ ಉಳಿದಿದ್ದ ತಂಗಳಿಗೆ ಉಪ್ಪಿನಕಾಯಿ ನೆಚ್ಚಿಕೊಂಡು ಶಾಸ್ತ್ರದ ಊಟ ಮಾಡಿದೆ.
ಊಟ, ಅಳುವಿನ ಕಾರ್ಯಕ್ರಮ ಮುಗಿದ ಮೇಲೆ ಎಷ್ಟೋ ಸಮಾಧಾನವಾಯಿತು. ಆದರೆ ಅವಳ ನೆನಪು ಒತ್ತರಿಸಿಕೊಂಡು ಬರಲು ಶುರುವಾಯಿತು.
‘ಪಾವನಾ’ ನನ್ನೊಲವಿನ ಅರ್ಧಾಂಗಿ. ನನ್ನೀ ಪುಟ್ಟ ಹೃದಯದ ಒಡತಿ. ಅಪ್ಪ ಅಮ್ಮ ಮೆಚ್ಚಿದರೆಂದು ಮರು ಮಾತಾಡದೆ ಅವಳಿಗೆ ತಾಳಿ ಕಟ್ಟಿದ್ದೆ. ಅವಳು ನಿಜವಾಗಿಯೂ ನನಗೆ ಇಷ್ಟವಾಗಿದ್ದಳು. ನಮ್ಮ ಸಂಸಾರ ನೌಕೆ ಯಾವುದೇ ಅಲೆಯ ರಭಸಕ್ಕೆ ಸಿಲುಕದೆ, ಕುಲುಕದೆ ಸುಗಮವಾಗಿ ಸಾಗುತ್ತಿತ್ತು. ಯಾರ ಶಾಪ ತಗುಲಿತೋ ಏನೋ? ಒಂದು ಬೃಹತ್ ಅಲೆ ನೌಕೆಗೆ ಬಡಿದು, ನೌಕೆಯ ಜೊತೆಗೆ ಪ್ರೀತಿ, ನಂಬಿಕೆ, ಸುಖ, ಸಂತೋಷವನ್ನೂ ತನ್ನೊಡಲಿಗೆ ಹಾಕಿಕೊಂಡು ಬಿಟ್ಟಿತು....
ಛೇ, ಸಾಕು, ಸಾಕು. ಕಹಿಯನ್ನು ಕೆದಕಿದಷ್ಟು ನೋವು ಜಾಸ್ತಿ. ಇನ್ನೊಂದಿಷ್ಟು ತಿಂದರೆ ಬೇವಿನ ರುಚಿ ಸಿಹಿಯಾಗಬಹುದು, ಇಷ್ಟವಾಗಬಹುದು ಎಂದು ಯಾರೂ ಅದನ್ನು ತಿನ್ನುವುದಿಲ್ಲ. ಬೇವು ಬೆಲ್ಲ ಕೊಟ್ಟರೆ, ಬೆಲ್ಲದ ತುಂಡನ್ನು ಮೆಲ್ಲುವವರೇ ಜಾಸ್ತಿ.
ಆದರೂ ಅವಳು ನನ್ನೊಂದಿಗೆ ಇರಬೇಕಿತ್ತು. ನಾವಿಬ್ಬರೂ ಇಷ್ಟಪಟ್ಟು ಕೊಂಡ ಮನೆಯಿದು. ಮನೆಯ ಗೃಹಪ್ರವೇಶಕ್ಕೆ ಅವಳು ನಾನಿಷ್ಟಪಟ್ಟು ಕೊಡಿಸಿದ್ದ ಮೈಸೂರು ರೇಷ್ಮೆ ಸೀರೆಯನ್ನುಟ್ಟಿದ್ದಳು. ಅವಳ ಮುಂದೆ ಅಪ್ಸರೆಯರನ್ನು ನಿವಾಳಿಸಿ ತೆಗೆಯಬೇಕು..
ಆಗಲೇ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಇನ್ನೇನು ಬೆಲ್ಲದ ತುಂಡು ಮೆಲ್ಲುತ್ತಾ, ರಸವನ್ನು ಹೀರುತ್ತಾ ರುಚಿಯನ್ನು ಅನುಭವಿಸುತ್ತಿರುವಾಗಲೇ, ಯಾರೋ ಬಲವಂತವಾಗಿ ಬೇವನ್ನು ತುರುಕಿದ ಹಾಗಾಯ್ತು!
ಅಸಹನೆಯಿಂದ ಬಾಗಿಲು ತೆಗೆದಾಗ ಪೋಸ್ಟ್ ಮ್ಯಾನ್ ನಿಂತಿದ್ದ. ಫೋನು ಇದ್ದರೆ ಸಾಕು, ಬೇರೆಲ್ಲಾ ಯಾಕೆ? ಅನ್ನುವ ಈ ಕಾಲದಲ್ಲಿ ನನಗ್ಯಾರು ಪೋಸ್ಟು ಕಳಿಸಿರಬಹುದು? ಅಂತ ತಲೆಗೆ ಹುಳ ಬಿಟ್ಟುಕೊಳ್ಳುತ್ತಲೇ, ಅವನು ಕೊಟ್ಟ ಕವರನ್ನು ತೆಗೆದುಕೊಂಡೆ.
ಸೋಫಾ಼ ಅಂಚಿನಲ್ಲಿ ಕುಳಿತು ಕವರ್ ಒಡೆದು ನೋಡಿದಾಗ ಒಳಗೆ ವಿಚ್ಛೇದನ ಪತ್ರವಿತ್ತು. ‘ನಿಂಗೆ ಡಿವೋರ್ಸ್ ಕೊಡ್ತೀನಿ. ನಿನ್ ಜೊತೆ ಬಾಳಕ್ಕಾಗಲ್ಲ ನಂಗೆ’ ಅಂತ ಸಾವಿರ ಸಲ ಪಾವನಾ ಹೇಳುತ್ತಾ ಇದ್ದುದರಿಂದ, ಇದನ್ನು ನೋಡಿ ನನಗೇನೂ ಆಶ್ಚರ್ಯವಾಗಲಿಲ್ಲ. ಆದರೆ ಮತ್ತೆ ಒತ್ತರಿಸಿಕೊಂಡು ಅಳು ಬಂತು. ಅತ್ತು ಹಗುರಾಗಲೋ? ಇಲ್ಲ ಇದಕ್ಕೆ ಸಹಿ ಹಾಕಿ ಬಿಡಲೋ? ಎಂಬ ಗೊಂದಲದಲ್ಲಿ ಹೆಚ್ಚು ಕಮ್ಮಿ ಅಳುವನ್ನು ಮರೆತೇ ಬಿಟ್ಟೆ.
ಗೊಂದಲವೇ ಜೀವನವಾಗುವುದು ಬೇಡವೆಂದು ಸಹಿ ಹಾಕಿದೆ. ಹೆಚ್ಚೇನು ಸತಾಯಿಸದೆ ವಿಚ್ಛೇದನ ಸಿಕ್ಕಿತು. ‘ಗಂಡ ಹೆಂಡ್ತೀನಾ ಬೇರೆ ಮಾಡಕ್ಕೆ ಜಗತ್ತು ಕಾಯ್ತಾ ಇರುತ್ತೇನೋ’ ಎಂದು ಒಳಗೊಳಗೇ ಗೊಣಗಿಕೊಂಡು, ಪಾವನಾ ಮುಖವನ್ನು ಕೊನೆಯ ಬಾರಿ ದೂರದಿಂದ ನೋಡಿ ಹೊರಟೆ.
ಪಾವನಾ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವಳಿಗೆ ನನ್ನನ್ನು ಬಿಟ್ಟು ಬದುಕಲು ಆಗುವುದೇ ಇಲ್ಲ. ಹಿಂದೆ ಒಂದು ಬಾರಿ ಜಗಳವಾಡಿಕೊಂಡು ತವರು ಮನೆಗೆ ಹೋದವಳು, ಮಾರನೇ ದಿನವೇ ವಾಪಸ್ಸು ಬಂದಿದ್ದಳು. ಈಗ ಅವಳ ಅಮ್ಮನ ಒತ್ತಾಯಕ್ಕೆ ಸಿಲುಕಿ ಡಿವೋರ್ಸ್ ಕೊಟ್ಟಿರ್ತಾಳೆ. ಮತ್ತೆ ಅವಳು ಖಂಡಿತ ಬರ‍್ತಾಳೆ ಎನ್ನುವ ವಿಶ್ವಾಸ ನನಗಿತ್ತು.
ಅವತ್ತೇ ಅವಳ ಅಮ್ಮ ‘ಅವ್ನಿಗೆ ಡಿವೋರ್ಸ್ ಕೊಡು’ ಅಂದಿದ್ದರಂತೆ. ಅವರ ಪಕ್ಕದ ಮನೆಯಲ್ಲಿರುವ ನನ್ನ ಗೆಳೆಯ ಸುಧಾಕರನಿಂದ ವಿಷಯ ತಿಳಿದಿತ್ತು. ಇದು ಅವಳ ಅಮ್ಮನದ್ದೇ ಪಿತೂರಿ ಇರಬೇಕು. ಆದರೆ ಎಂದಿಗೂ ಅವಳ ಬಳಿ ಹೋಗಿ, ‘ವಾಪಸ್ಸು ಬಾ ಪಾವನಾ. ಜೊತೆಗೆ ಇರೋಣ’ ಅಂತ ನಾನು ಹೇಳಿರಲಿಲ್ಲ.
ಇದನ್ನೂ ಓದಿ : ಒಂದು ಕೋಮಲೆಯ ಕಥೆ
ಹೇಳಬೇಕಿತ್ತು ಅಂತ ಈಗ ಅನ್ನಿಸಿತು. ಅವಳು ಯಾಕಾದರೂ ನನ್ನಿಂದ ದೂರವಾದಳು? ಪ್ರೀತಿಗೆ ನನ್ನ ಕಡೆಯಿಂದ ಏನೂ ಕೊರತೆ ಇರಲಿಲ್ಲ. ಕಾರಣ ಕೇಳಿದರೆ "ನೀನ್ ನಂಗೆ ಬೇಡ, ಅಷ್ಟೇ" ಎಂದು ಮಾತು ಮುಗಿಸುತ್ತಿದ್ದಳು. ಅವತ್ತೇ ಇದನ್ನೆಲ್ಲಾ ಬಗೆ ಹರಿಸಿದ್ದರೆ ಇಂದು ಹೀಗೆ ಆಗುತ್ತಿರಲಿಲ್ಲ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ!
ವಿಚ್ಛೇದನ ಕೊಟ್ಟ ಮೇಲೂ ಅವಳ ನಿರೀಕ್ಷೆಯಲ್ಲಿ ನಾನಿದ್ದದನ್ನು ಕಂಡು ನನ್ನ ಗೆಳೆಯರೆಲ್ಲಾ ಅಪಹಾಸ್ಯ ಮಾಡುತ್ತಿದ್ದರು. ‘ನೋಡು ಮಗಾ, ಒಂದ್ಸಲ ದೂರ ಹೋದೋರು ಮತ್ತೆ ಬರಲ್ಲ ಕಣೋ’ ಅಂದಾಗ, ನಾನು, ‘ನನ್ನದು ಶುದ್ಧ ಪ್ರೇಮ. ಅದರ ಅರಿವಾಗಿ ಅವಳು ಖಂಡಿತ ನನ್ನನ್ನು ಸೇರಿಕೊಳ್ತಾಳೆ, ನೋಡ್ತಿರಿ’ ಅಂತ ಅದೇ ರಾಗವನ್ನು ಹಾಡುತ್ತಿದ್ದೆ. ಅವರಂತೂ ಕೊನೆ ಕೊನೆಗೆ ನನಗೆ ಬುದ್ಧಿವಾದ ಹೇಳುವುದನ್ನೇ ಬಿಟ್ಟರು.
ಹೀಗೇ ನಿರೀಕ್ಷೆ ಹಾಗೂ ಒಂಟಿತನದ ಜೊತೆಗೆ ನಾನು ಕಾಲ ಕಳೆಯುತ್ತಿದ್ದೆ. ವರ್ಷಗಳೆರಡು ಸರಿದು ಹೋದವು.
ಒಂದು ಭಾನುವಾರ ಪಾವನಾ ನೆನಪಿನಲ್ಲಿ, ನಮ್ಮ ಮದುವೆ ಆಲ್ಬಂ ಅನ್ನು ತಿರುವು ಹಾಕುತ್ತಿದ್ದೆ. ‘ಈ ಹಳೆಯ ನೆನಪುಗಳನ್ನು ಸವಿಯಲು ನಿನಗೆ ಅವಕಾಶ ಮಾಡಿಕೊಡಲಾರೆ’ ಎಂಬಂತೆ ಬಾಗಿಲನ್ನು ಯಾರೋ ಬಡಿದರು. ‘ಥೂ, ಇದೊಂದು ಕಾಟ’ ಎನ್ನುತ್ತಾ ಬಾಗಿಲು ತೆಗೆದರೆ, ಪೋಸ್ಟ್ ಮ್ಯಾನ್ ಒಂದು ಕವರ್ ಕೊಟ್ಟು ಹೋದ.
ಹಿಂದೊಮ್ಮೆ ಹೀಗೆಯೇ ವಿಚ್ಛೇದನ ಪತ್ರ ಬಂದಿದ್ದು ನೆನಪಾಗಿ, ಇದೇನಿರಬಹುದು? ಅನ್ನುವ ಕುತೂಹಲ ಹೆಚ್ಚಾಯ್ತು. ಕವರ್ ಒಡೆದಾಗ ಒಳಗೊಂದು ಮದುವೆ ಆಮಂತ್ರಣ. ‘ಪಾವನಾ ವೆಡ್ಸ್ ಶಶಾಂಕ್’ ಎಂದು ಸುಂದರವಾಗಿ ಮುದ್ರಿಸಲಾಗಿತ್ತು. ಪಾವನಾ ಎಂಬ ಹೆಸರಿನಿಂದ ಪೋಸ್ಟ್ ಬಂದಿತ್ತು.
ಆಮಂತ್ರಣವನ್ನು ಹರಿದೆಸೆದವನೇ ಬಚ್ಚಲು ಮನೆಗೆ ಓಡಿದೆ.....
ಸುಮಾರು ಒಂದು ವಾರವಾದ ಮೇಲೆ ಕೋಕಿಲಾ ಆಂಟಿ, ಅಕ್ಕ ಪಕ್ಕದವರನ್ನೆಲ್ಲಾ ಕರೆದು, ‘ಒಂದು ವಾರ ಆಯ್ತಲ್ರೀ, ಈ ಮನ್ಶ ಮನೆಯಿಂದ ಹೊರಗೇ ಬಂದಿಲ್ಲ. ಬೀಗ ಬೇರೆ ಹಾಕಿಲ್ಲ. ಒಂಚೂರು ಓನರಿಗೆ ಫೋನ್ ಮಾಡ್ರೀ, ಕೀ ತರಕ್ಕೆ ಹೇಳ್ರಿ. ನಾವೇ ಓಪನ್ ಮಾಡಣ’ ಅಂತ ಗಾಬರಿಯಿಂದ ಕಿರುಚುತ್ತಿದ್ದರು.
ತರಕಾರಿ ಮಾರುವ ಸುರೇಶ ಕೀ ಬರುವವರೆಗೂ ಕಾಯಲಾರದೆ, ಬಾಗಿಲಿಗೆ ಜೋರಾಗಿ ಒದೆಯುತ್ತಿದ್ದ. ದಢ್. ದಢ್. ದಢ್.. ಜೊತೆಗೆ ‘ಇದೊಂದ್ ಶನಿ ಬಾಗ್ಲು. ಒಳ್ಗಡೆ ಏನಾಗಿದ್ಯೋ ಏನೋ’ ಎಂಬ ಬೈಗುಳ ಬೇರೆ. ಮತ್ತೆ ಪುನಃ ದಢ್. ದಢ್. ದಢ್!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


