ಅವನೋ... ಇಲ್ಲ, ಇವನೋ...

 ಕಥಾನಾಯಕಿ : 'ಅವಳು'

ಕಥಾನಾಯಕ (ನಾಯಕರು) : 'ಅವನು' ಮತ್ತು 'ಇವನು '

   'ಅವನು' ಬಟ್ಟಲುಗಣ್ಣಿನ ಹುಡುಗ. ಸೂಕ್ಷ್ಮ, ಮೃದು ಮನಸು. ಮನೆಯ ಒಳಾಂಗಣ ವಿನ್ಯಾಸವನ್ನು ಇತರರಿಗಿಂತ ವಿಭಿನ್ನವಾಗಿ ಮಾಡುವ ಅವನು, ತನ್ನ ಮನಸಿನ ಮನೆಯನ್ನು ಅಂದವಾಗಿಸುವ ಮುಗ್ಧ ಮನಸಿಗಾಗಿ ಕಾಯುತ್ತಿದ್ದ. ಹರೆಯದ ಮೆಟ್ಟಿಲಲ್ಲಿದ್ದರೂ  ' ಅವಳನ್ನು ' ಹೊರತುಪಡಿಸಿ, ಬೇರೆ ಹುಡುಗಿಯರೊಂದಿಗೆ ಸ್ನೇಹ, ಸಲಿಗೆ ಬೆಳೆಸಿರಲಿಲ್ಲ.

   'ಅವಳು' ಬಾಹ್ಯ ಸೌಂದರ್ಯದಲ್ಲಿ ಅವನಿಗಿಂತ ಒಂದು ಕೈ ಕಡಿಮೆ. ತನಗಾಗಿ ತಾನು ಚಂದ ಕಂಡರೆ ಸಾಕು ಎನ್ನುವ ಮನಸ್ಥಿತಿ. ಆದರೆ, ಆಂತರಿಕ ಸೌಂದರ್ಯ ಬೇರೆಯವರು ಅಸೂಯೆ ಪಡುವಷ್ಟು ಸಮೃದ್ಧವಾಗಿತ್ತು ಅವಳಲ್ಲಿ. ಅದೇ ಅವಳ ವ್ಯಕ್ತಿತ್ವಕ್ಕೆ ಮೆರುಗು ನೀಡಿತ್ತು. ಅವಳಿಗೆ 'ಅವನು' ಹಾಗೂ 'ಇವನು' ಆತ್ಮೀಯರು. ಹೇಳದೇ ಉಳಿದುಹೋದ ಮಾತು ಎಷ್ಟೋ ಇತ್ತು ಅವಳ ಒಡಲಲ್ಲಿ....

   'ಇವನು' ತುಸು ಒರಟು ಎನ್ನಬಹುದಾದ ವ್ಯಕ್ತಿತ್ವ. ಮನಸಿಗೆ ಹತ್ತಿರ ಆದವರನ್ನು ಏನೇ ಆಗಲಿ ಬಿಟ್ಟುಕೊಡದ ವಿಶಾಲ ಮನಸು. 'ಅವಳ' ಮೇಲೆ ಅದೇನೋ ಆಕರ್ಷಣೆ. ಅವಳೂ ನಾಚಿ ನೀರಾಗುವಂತೆ;

   'ನಿನ್ನ ಪ್ರೀತಿಸ್ತೀನಿ.. ಮದ್ವೆ ಆಗ್ತೀಯಾ?' ಅಂತ ಇದ್ದಬದ್ದ ಧೈರ್ಯ ಒಟ್ಟುಗೂಡಿಸಿ ಕೇಳಿದ್ದ. ಅವಳಿಂದ ಉತ್ತರ ಬಂದಿರಲಿಲ್ಲ!

   'ಇವನು' ಕೆಮಿಸ್ಟ್ರಿ ಲ್ಯಾಬಿನಲ್ಲಿ ಬಣ್ಣ ಬಣ್ಣದ ರಸಾಯನಗಳ ಲೋಕದಲ್ಲಿ ಕಳೆದುಹೋಗುವ ಹುಡುಗ. 'ಅವಳು' ಕೈಯ್ಯಲ್ಲಿ ನಯಾಪೈಸೆ ಇಲ್ಲದಿದ್ದರೂ, ಕ್ಯಾಲ್ಕುಲೇಟರ್ ಅಲ್ಲಿ ಲಕ್ಷ ಲಕ್ಷ ಲೆಕ್ಕ ಹಾಕುವ ಹುಡುಗಿ. ಪರಸ್ಪರ ವಿರುದ್ಧ ವಿಷಯಗಳನ್ನು ಓದುತ್ತಿದ್ದ ಇವರನ್ನು ಒಂದು ಮಾಡಿದ್ದು ಕಾರಿಡಾರು. ಬಣ್ಣದಲ್ಲಿಯೇ ಮುಳುಗಿರುವ ಅವನ ಕಣ್ಣಿಗೆ ಅವಳು ವರ್ಣ ಲೋಕದ ಅಪ್ಸರೆಯಂತೆ ಕಂಡಿದ್ದು ವಿಶೇಷವೇನಲ್ಲ...

   ಕಥೆಯ ನಾಯಕರಿಬ್ಬರೂ ನಾಯಕಿಯ ಮೇಲೆ ಆಕರ್ಷಿತರು. ನಾಯಕಿಯೂ ಇದಕ್ಕೆ ಹೊರತಲ್ಲ. ಆದರೆ ಅವಳು ಎಂದಿಗೂ ತನ್ನ ಸ್ವಗತವನ್ನು ಬಿಚ್ಚಿಟ್ಟವಳಲ್ಲ...

   'ಇವನ' ಪ್ರೀತಿಯ ಪ್ರಸ್ತಾಪ ಅವಳಲ್ಲಿ ಹೊಸದಂದು ಪುಳಕ ಮೂಡಿಸಿದ್ದೇನೋ ಸರಿ. ಆದರೆ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಅವಳಲ್ಲಿ ಇರಲೇ ಇಲ್ಲ. ಬದುಕಿನ ಕುರಿತು ಸಾಕಷ್ಟು ಕನಸು ಕಂಡಿದ್ದ ಅವಳಿಗೆ ಇವನು ತಕ್ಕವನಲ್ಲ ಎಂದು ಎಲ್ಲೋ ಒಂದು ಬಾರಿ ಅನಿಸಿತ್ತು. ಇವನು ಮಾತ್ರ ಕಾರಿಡಾರಿನಲ್ಲಿ ನಡೆಯುವಾಗ ಕಾಮರ್ಸ್ ಕ್ಲಾಸಿನ ಕಡೆಗೆ ಕತ್ತು ಕೊಂಕಿಸದೆ ಮುಂದೆ ಹೋಗುತ್ತಲೇ ಇರಲಿಲ್ಲ. ಅವಳು ಏನೂ ಕಮ್ಮಿ ಇಲ್ಲ. ಕೆಮಿಸ್ಟ್ರಿ ಲ್ಯಾಬಿನ ಘಾಟು ವಾಸನೆ ವಾಕರಿಕೆ ತರಿಸಿದರೂ, ಪ್ರತಿದಿನ ಊಟವಾದ ನಂತರ ಕ್ಲಾಸಿನಲ್ಲಿ ನಿದ್ದೆ ಬರಬಾರದು ಅಂತ ಸುಳ್ಳು ನೆಪ ಹೇಳಿ ಕೆಮಿಸ್ಟ್ರಿ ಲ್ಯಾಬಿನವರೆಗೂ ಪಾದ ಬೆಳೆಸುತ್ತಿದ್ದಳು.

   ಈ ಸಣ್ಣ ಪುಟ್ಟ ಕಣ್ಣಿನ ಸನ್ನೆ, ನಗುವಿನ ವಿನಿಮಯ ನಡೆಯುವಾಗಲೇ ಅವಳಿಗೆ ಆಕಸ್ಮಿಕವಾಗಿ ಪರಿಚಯವಾಗಿದ್ದು 'ಅವನು'.... ಅಲ್ಲಿಂದ ನಡೆದಿದ್ದೇ ಬೇರೆ!!

   ಅದೊಂದು ದಿನ, ಡ್ರಾಯಿಂಗ್ ಶೀಟ್ ಕಟ್ಟನ್ನು ಹೊತ್ತು ಕ್ಯಾಂಟೀನಿನ ದ್ವಾರದಿಂದ ಪ್ರವೇಶಿಸುತ್ತಿದ್ದ 'ಅವನ' ಕೈಯ್ಯಲ್ಲಿದ್ದ ಕಟ್ಟು ಕ್ಷಣಮಾತ್ರದಲ್ಲಿ ಕೆಸರು ನೆಲವನ್ನು ಸೋಕಿತ್ತು. ಒಂದು ಕಡೆ ಅರೆಕ್ಷಣವೂ ಬಿಡದ ಮಳೆ, ಇನ್ನೊಂದು ಕಡೆ ನೆಲದ ಮೇಲೆ ಅಂಗಾತ ಮಲಗಿದ್ದ ಶೀಟ್ ಕಟ್ಟು. ತಲೆ ಚಿಟ್ಟು ಹಿಡಿದಿತ್ತು. ಆಗಲೇ ಸಹಾಯಹಸ್ತ ಚಾಚಿದವಳು 'ಅವಳು'. ಹತ್ತಿರದಲ್ಲೇ ಇದ್ದ ಅಂಗಡಿಯಿಂದ ಶೀಟ್ ಖರೀದಿಸಿ ಕೊಟ್ಟಿದ್ದು ಮಾತ್ರವಲ್ಲ, ಅವನು ಬಲವಂತ ಪಡಿಸಿದರೂ ದುಡ್ಡು ಪಡೆಯದೇ, ಹೆಸರೂ ಹೇಳದೇ, ಹಿಂತಿರುಗಿ ನೋಡದೆ ಹೋಗಿದ್ದಳು...

   ಯಾವ ಮಳೆ ಅವಳ ಮುಖ ಪರಿಚಯ ಮಾಡಿತ್ತೋ, ಅದೇ ಮಳೆ ಮುಂದೆ ಅದೇ ಕ್ಯಾಂಟೀನಿನಲ್ಲಿ ಎದುರು ಬದುರು ಕುಳಿತು ಮಸಾಲೆದೋಸೆ ತಿನ್ನುವ ಜೊತೆಗೆ ಕನಸು ಹಂಚಿಕೊಳ್ಳುವವರೆಗೂ ಮುಂದುವರೆದಿತ್ತು.

ಇದನ್ನೂ ಓದಿ : ಗುಟ್ಟಾಗಿ ಉಳಿದ ಕಾರಣ...

   ಬಣ್ಣದ ಲೋಕದ ಹುಡುಗ ಕಾಡುವುದನ್ನು ಬಿಟ್ಟಿರಲಿಲ್ಲ. ಇಂಟೀರಿಯರ್ ಡಿಸೈನ್ ಹುಡುಗ ದಿನದಿಂದ ದಿನಕ್ಕೆ ಹತ್ತಿರವಾಗುತ್ತಿದ್ದ. ಅವಳ ಪ್ರತಿ ನಿಶೆಯೂ ಗೊಂದಲದಲ್ಲಿ ಮುಗಿಯುತ್ತಿತ್ತು!! 'ಅವನು' ಅಥವಾ 'ಇವನು' ಎಂಬ ನಿರ್ಧಾರಕ್ಕೆ ಬರೋಣ ಎನ್ನುವುದರೊಳಗೆ ಸೂರ್ಯ ಗುಡ್ ಮಾರ್ನಿಂಗ್ ಹೇಳುತ್ತಿದ್ದ.

   ೧೨ ತಿಂಗಳುಗಳು ಯೋಚನೆ ಮತ್ತು ಗೊಂದಲಕ್ಕಿಂತ ವೇಗವಾಗಿ ಸರಿದಿತ್ತು. 'ಅವಳ' ಹಾಗೂ 'ಇವನ' ಕಾಲೇಜಿನ ಕೊನೆಯ ದಿನವದು. 'ನಿನ್ನ ನಿರ್ಧಾರ ಇವತ್ತು ಆದ್ರೂ ಹೇಳು ಮಾರಾಯ್ತಿ' ಎಂದು ಇವನು ಗೋಗರೆಯುವುದನ್ನು ಕೇಳುವ, ನೋಡುವ ಮನಸ್ಸಿಲ್ಲದೆ ಕಾಲೇಜಿನ ಕಡೆಗೆ ಹೆಜ್ಜೆಯೇ ಹಾಕಿರಲಿಲ್ಲ.


   ಇಷ್ಟು ವರ್ಷ ಓದಿದ್ದಕ್ಕೆ ಒಂದು ಕೆಲಸ ಇಲ್ಲದೇ ಇದ್ದರೆ ಹೇಗೆ? ಹೀಗೊಂದು ಯೋಚನೆಗೆ ಬಿದ್ದು ಯಾವುದೋ ಶಹರದ ಅದ್ಯಾವುದೋ ಆಫೀಸಿನಲ್ಲಿ, ಬರಿಗೈ ಫಕೀರನಾದರೂ ಲಕ್ಷಗಟ್ಟಲೆ ಎಣಿಸುವ ಕೆಲಸಕ್ಕೆ ಸೇರಿಕೊಂಡಿದ್ದಳು. ಆಗಾಗ ಕಥಾನಾಯಕರು ನೆನಪಾಗುತ್ತಿದ್ದರೂ, ಕೆಲಸದ ಒತ್ತಡ ಅವಳನ್ನು ಬಿಡುತ್ತಿರಲಿಲ್ಲ.

   ಮನೆಯಿಂದ ಮದುವೆಯ ಮಾತುಕತೆ ಬಂದಾಗ ಅವಳಿಗೆ ಮೊದಲು ನೆನಪಾಗಿದ್ದು 'ಅವನು'. ಇವನಿಗಿಂತ ಅವನ ಕಡೆಗೆ ಅವಳು ಹೆಚ್ಚು ಆಕರ್ಷಣೆ ಹೊಂದಿದ್ದು ಅವಳ ಮನಸಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ. ಅವನ ನೆನಪು ಒತ್ತರಿಸಿ ಬಂದು ಫೋನ್ ಮಾಡಿದರೆ ಅತ್ತ ಕಡೆಯಿಂದ ಅದೇ ಸಲಿಗೆಯ ಮಾತು.. ಪ್ರೀತಿ ತುಂಬಿದ ಒಂದೊಂದು ಸಾಲು... 'ಅವನು' ನನಗೆ ಸೂಕ್ತ ಎಂದು ಆ ಕ್ಷಣಕ್ಕೆ ನಿರ್ಧರಿಸಿದಳು. ನಿರ್ಧರಿಸಿದ ಮರುಕ್ಷಣವೇ ' ಇವನ ' ಫೋನು. ನಿರಾಕರಣೆಯ ಮಾತಾಡಿದಾಗ ಮನಸು ನಿರಾಳ!

   ಆದರೂ, ಅವಳಿಗೆ ಅವನಿಗಿಂತ ಕಮಟು ವಾಸನೆ ಬೀರುವ, ಬಿಳಿ ಕೋಟ್ ತೊಟ್ಟ, ಕೆಮಿಸ್ಟ್ರಿ ಲ್ಯಾಬಿನ ಹುಡುಗನೇ ಕಾಡುತ್ತಿದ್ದ... ಕಾರಣವಿರಲಿಲ್ಲ... ಅಥವಾ ಕಾರಣವನ್ನು ಅವಳು ಹುಡುಕಿಯೇ ಇರಲಿಲ್ಲ...

   ಮೆಲ್ಲನೆ, ಕೆಲವೊಮ್ಮೆ ಬೇಗನೇ ದಿನಗಳು ಸರಿಯುತ್ತಿರಲು, ಅವಳ ನಿಶೆಯ ಗೊಂದಲ ಮತ್ತೆ ಆರಂಭವಾಗಿತ್ತು. ನಿದ್ರಾದೇವಿ ಹತ್ತಿರ ಸುಳಿಯಲೂ ನಿರಾಕರಿಸಿದಾಗ ಅವಳ ನೆಮ್ಮದಿಯೇ ಹಾರಿಹೋಯಿತು.

   ಇನ್ನೀಗ ಒಂದೇ ದಾರಿ, ಇಬ್ಬರನ್ನೂ ಮನಸಾರೆ ಮಾತನಾಡಿಸುವುದು. ಯಾರಿಗೆ ನನ್ನ ಮೇಲೆ ಅಪಾರ ಪ್ರೀತಿ ಇದೆಯೋ ಅವರ ಜೊತೆಯೇ ಜೀವನ ಸವೆಸುವುದು ಎಂದು.

   ಕಾಕತಾಳೀಯ ಅನ್ನುವ ಹಾಗೆ; ಮರುದಿನ ಸಂಜೆ ಅವನ ಕರೆ. ನೀನು ಸಿಗಲೇಬೇಕು... ನಿನಗೆ ಏನೋ ಹೇಳಬೇಕು... ಎನ್ನುವ ಒತ್ತಾಯ. ಮನಸಿನಲ್ಲಿ ಸಾವಿರ ನಿರೀಕ್ಷೆ ಇಟ್ಟು ಎದುರು ನಿಂತಾಗ ಕೈಯ್ಯಲ್ಲಿ 'ಅವನ' ಮದುವೆ ಪತ್ರಿಕೆ!!!

   'ನೀನು ಬರಲೇಬೇಕು... ಇಲ್ಲಾಂದ್ರೆ ನಮ್ಮ ಫ್ರೆಂಡ್ಶಿಪ್ ಕಟ್' ಎನ್ನುವ ನಾಟಕದ ಮಾತುಗಳು. ಕತ್ತಿಯ ಅಲುಗಿಗೆ ಬಾಯಿ ಕೊಟ್ಟಂತೆ ಆಗಿತ್ತು ಅವಳ ಸ್ಥಿತಿ!! ಸತ್ಯ ಕಹಿ!!!

    ಭಾರವಾದ ಮನಸು, ಮುರಿದುಬಿದ್ದ ಕನಸು, ಮೊಳಕೆಯಲ್ಲೇ ಚಿವುಟಿದ ನಿರೀಕ್ಷೆಗಳು ಎಂಬ ಕೂಸು... ಇವುಗಳೊಂದಿಗೆ ಹೆಜ್ಜೆ ಹಾಕುತ್ತಾ ರೂಮಿನ ಕಡೆ ನಡೆದವಳಿಗೆ, ರೂಮಿನ ಬಾಗಿಲಿನ ಬಳಿ ಬಿದ್ದಿದ್ದ 'ಇವನ' ಮದುವೆ ಕಾರ್ಡು ಕಣ್ಣಿಗೆ ಬಿತ್ತು......


ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.



ಪ್ರಚಲಿತ ಪೋಸ್ಟ್‌ಗಳು