ಇದುವೇ ಜೀವನ... ಇದುವೇ ಜೀವನಾನಂದ!

  ಜೀವನವೇ ಹಾಗೆ. ಅನಿರೀಕ್ಷಿತ ತಿರುವುಗಳು, ಹೆಜ್ಜೆಹೆಜ್ಜೆಗೂ ಅನುಭವಗಳು, ಪ್ರತಿಯೊಬ್ಬನೂ ಕಲಿಸುವ ಪಾಠಗಳು, ಖುಷಿ, ಬೇಸರ, ನಿರೀಕ್ಷೆ, ನಿರಾಸೆ, ಸೋಲು, ಗೆಲುವು.. ಇವೆಲ್ಲದರ ಸಮ್ಮಿಶ್ರಣ. ಇದೆಲ್ಲವನ್ನು ಜೀವನದಲ್ಲಿ ಅಳವಡಿಸಿಕೊಂಡಾಗಲೇ, ಅದು ‘ಜೀವನ’ ಎನಿಸಿಕೊಳ್ಳುತ್ತದೆ. ಹಾಗಾದರೆ ನಾವು ಜೀವಿಸುತ್ತಿರುವ ಧ್ಯೇಯೋದ್ದೇಶವಾದರೂ ಏನು? ಬಹುಶಃ ಇದೊಂದು ಉತ್ತರ ಸಿಗದ ಪ್ರಶ್ನೆ. ಅಥವಾ ಸಿಕ್ಕಿದರೂ ಮನಸ್ಸಿಗೆ ಸಮಾಧಾನ ನೀಡದ ಉತ್ತರ.



   ಪ್ರತಿಯೊಬ್ಬನೂ ತನ್ನ ಜೀವಿತಾವಧಿಯಲ್ಲಿ ‘ನಾನು ಜೀವಿಸುತ್ತಿರುವುದಾದರೂ ಏಕೆ?’ ಎಂಬ ಪ್ರಶ್ನೆಯನ್ನು ಒಂದಲ್ಲಾ ಒಂದು ಬಾರಿ, ತನಗೆ ತಾನೇ ಕೇಳಿಕೊಂಡಿರುತ್ತಾನೆ. ಸತತ ಸೋಲು ಕಂಡಾಗ, ನೆಮ್ಮದಿ ಇಲ್ಲವಾದಾಗ, ಮೇಲಿಂದ ಮೇಲೆ ಒತ್ತಡ ಬಿದ್ದಾಗ, ಪ್ರೀತಿಪಾತ್ರರಿಂದ ದೂರವಾದಾಗ.. ಹೀಗೇ ಆತ ಜೀವನವನ್ನು ದೂಷಿಸಲು ಒಂದಲ್ಲಾ ಒಂದು ಕಾರಣವನ್ನು ಸೃಷ್ಟಿಸುತ್ತಾನೆ ಅಥವಾ ಸನ್ನಿವೇಶ ಅವನನ್ನು ಆಡಿಸುತ್ತಿರುತ್ತದೆ.


   ಹಾಗಾದರೆ ಸದಾ ಸಂತೋಷ, ನೆಮ್ಮದಿ, ಗೆಲುವಿನಿಂದಿರಲು ಏನು ಮಾಡಬೇಕು? ಅದಕ್ಕೆ ಶಾಶ್ವತ ಸೂತ್ರಗಳೇನಿಲ್ಲ. ಪ್ರತಿಯೊಬ್ಬರೂ ತಾವು ಮಂದಸ್ಮಿತರಾಗಿರಲು, ಮನಸ್ಸಮಾಧಾನದಿಂದಿರಲು ತಮ್ಮದೇ ಸೂತ್ರಗಳನ್ನು ಪಾಲಿಸುತ್ತಾರೆ. ಕೆಲವರಿಗೆ ಸಣ್ಣ ವಿಷಯಗಳಲ್ಲಿಯೂ ಅಗಾಧ ಆನಂದ ಸಿಗುತ್ತದೆ. ಇನ್ನು ಕೆಲವರಿಗೆ ಆಹಾರ, ಬಟ್ಟೆ ಮುಂತಾದವುಗಳಿಂದ ದೊರೆಯಬಹುದು. ಹಾಗೂ ಇನ್ನುಳಿದವರಿಗೆ ಪ್ರಕೃತಿಯೇ ಔಷಧಿಯಾಗಿರಬಹುದು.

   ನಾವೆಲ್ಲರು ಚಹರೆಯಲ್ಲಿ ಹೇಗೆ ಭಿನ್ನರೋ, ಯೋಚನೆಗಳಲ್ಲಿಯೂ ಹಾಗೆ. ಎಲ್ಲರ ಮನಗೆದ್ದ ಒಬ್ಬ ವ್ಯಕ್ತಿ, ನಮ್ಮ ಪಾಲಿಗೆ ಶತ್ರುವಾಗಿರಬಹುದು. ಎಲ್ಲರ ಕಣ್ಣಿಗೆ ಕೆಟ್ಟವನಂತೆ ಕಾಣುವವನು, ನಮ್ಮ ಮನಸ್ಸಿನಲ್ಲಿ ಒಳ್ಳೆಯ ಜಾಗವನ್ನು ಪಡೆದಿರಬಹುದು. ಹಾಗೆಯೇ ನಮಗೆ ಪ್ರಮೋದ ನೀಡುವ ವಸ್ತು, ವಿಷಯಗಳು ಇನ್ನೊಬ್ಬರಿಗೆ ಇಷ್ಟವಾಗಬೇಕೆಂದೇನಿಲ್ಲ. ಆದರೂ, ಪೂರ್ತಿ ಸಂತೋಷ, ನೆಮ್ಮದಿಯನ್ನು ಪಡೆದುಕೊಂಡ ವ್ಯಕ್ತಿ ಪ್ರಪಂಚದ ಯಾವ ಮೂಲೆಯಲ್ಲಿಯೂ ಸಿಗುವುದಿಲ್ಲ.


   ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಕವಿವಾಣಿ ಎಂದಿಗೂ ಪ್ರಸ್ತುತ. ಒಮ್ಮೆ ನಿಮ್ಮನ್ನು ನೀವೇ ಅವಲೋಕಿಸಿಕೊಳ್ಳಿ. ಅದೆಷ್ಟು ಬಾರಿ ನಾವು ಗಗನ ಕುಸುಮಗಳಿಗಾಗಿ ಕೈ ಚಾಚಿಲ್ಲ? ಇತರರ ವಸ್ತುಗಳಿಗಾಗಿ ಆಸೆ ಪಟ್ಟಿಲ್ಲ? ಶ್ರೀಮಂತ ಬದುಕನ್ನು ಬಯಸಿಲ್ಲ? ಹಲವು ಬಾರಿ ಇತರರನ್ನು ಕಂಡು, ಕರುಬಿ, ನಮ್ಮನ್ನು ಆ ಸ್ಥಾನದಲ್ಲಿ ಕಲ್ಪಿಸಿಕೊಂಡು ಅದನ್ನೇ ಖುಷಿ ಎಂದುಕೊಂಡಿರುತ್ತೇವೆ.


   ಎಲ್ಲರೂ ಅವರವರ ಮಿತಿಯಲ್ಲಿ ಸಂತೋಷವನ್ನು ಹುಡುಕಿ, ಅದನ್ನು ಅನುಭವಿಸಿದರೆ ಮನಶ್ಶಾಂತಿಗಾಗಿ ಎಲ್ಲೆಲ್ಲೋ ಅಲೆಯುವ ಅಗತ್ಯವೇ ಇರುವುದಿಲ್ಲ!
 

ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


ಪ್ರಚಲಿತ ಪೋಸ್ಟ್‌ಗಳು