ಮನುಷ್ಯನ ಬದುಕು ಅದೆಷ್ಟು ಅನಿಶ್ಚಿತ?!
'ನಿದ್ದೆ ಎಂದರೆ ತಾತ್ಕಾಲಿಕ ಸಾವು, ಸಾವು ಎಂದರೆ ಶಾಶ್ವತ ನಿದ್ದೆ' ಎಂದು ಯಾರೋ ಮಹಾನುಭಾವರು ಹೇಳಿದ್ದನ್ನು ಓದಿದ ನೆನಪು! ಆಗ ಅದು ಇಷ್ಟೊಂದು ನಾಟಿರಲಿಲ್ಲ. ಆದರೆ ಬುದ್ಧಿ ಒಂದಿಷ್ಟು ಬಲಿತ ಮೇಲೆ ಸಾವು ಎನ್ನುವ ಹೊಸ ಸ್ನೇಹಿತನ ಪರಿಚಯ ಆದಮೇಲೆ ಈ ಸಾಲುಗಳು ಶಾಶ್ವತವಾಗಿ ಮನಸ್ಸಿನಲ್ಲಿ ಫೆವಿಕಾಲ್ ಹಾಕಿದಂತೆ ಕೂತುಬಿಟ್ಟಿದೆ.
ನಿನ್ನೆ ತಾನೇ ನಮ್ಮ ಜೊತೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಾ ಮಾತು ಆಡಿದವರು, ಮೊನ್ನೆಯಷ್ಟೇ ಅವರ ಗೇಟಿನ ಮುಂದೆ ಗಾಡಿ ನಿಲ್ಲಿಸಿದ್ದಕ್ಕೆ ಬಾಯಿಗೆ ಬಂದಂತೆ ಬೈದವರು, ಅದೊಂದು ದಿನ ಸಹಾಯಹಸ್ತ ಚಾಚಿದವರು, ನಾವು ದೀನರಾಗಿ ಬೇಡಿಕೊಂಡರೂ ತೊರೆದು ಹೋದವರು, ಕೊನೆ ತನಕ ನಮ್ಮ ಜೊತೆಗೆ ಇರುವವರು... ಇವರೆಲ್ಲಾ ಒಂದಲ್ಲಾ ಒಂದು ದಿನ ನಮ್ಮ ನೆನಪುಗಳಲ್ಲಿ ಮಾತ್ರ ಉಳಿಯುವಂತೆ ಆಗುತ್ತಾರಲ್ಲ, ಆ ಮಾಯಾಂಗಿನಿಯ ಹೆಸರೇ 'ಸಾವು'.
![]() |
| Captured by VarshaClicks |
ನಾವು ಕೊನೆಯುಸಿರು ಎಳೆಯುವವರೆಗೂ ಅವಳು ನಮ್ಮ ಪಾಲಿಗೆ ನಿಗೂಢ! ನಾವು ಕೈಲಾಸಯಾತ್ರೆ ಮಾಡಿದಮೇಲೆ ನಮ್ಮನ್ನು ಕಂಡ ಇತರರ ಯೋಚನೆಗಳ ಮೇಲೆ ಹಿಡಿತ ಸಾಧಿಸಿಬಿಡುತ್ತಾಳೆ!!
ಏನೂ ನೋವು ತಿನ್ನದೆ ಸಾಯುವವರು ತುಂಬಾ ಪುಣ್ಯ ಮಾಡಿದವರು, ನರಕಯಾತನೆ ಕಂಡು ವೈಕುಂಠ ಕಂಡವರು ಪಾಪ ಮಾಡಿಯೇ ಭೂಮಿಗೆ ಬಂದವರು, ಸಾವು ಹತ್ತಿರದಲ್ಲೇ ಮಲಗಿದ್ದರೂ ನಮ್ಮನ್ನು ಕ್ಯಾರೇ ಎನ್ನದೆ, ಅದರ ಲೋಕಕ್ಕೆ ಪಾಶ ಹಾಕಿ ಎಳೆದೊಯ್ಯದೆ, ದಿನಗಟ್ಟಲೆ ಕಾಯಿಸಿದರಂತೂ, ಹಿಂದಿನ ಜನ್ಮದಲ್ಲಿ ಪಾಪ ಮಾಡಿದವರೇ, ಎಲ್ಲರಿಗೂ ಕೇಡು ಬಯಸಿದವರೇ ಸೈ!
ಹೀಗೇ ಹೇಳ ಹೊರಟರೆ ನಿಗೂಢ ಲೋಕದ ಅಧಿಪತಿ ಸಾವಿನ ಬಗ್ಗೆ ಸಾವಿರ ನಂಬಿಕೆಗಳಿವೆ. ಆದರೆ, ಅವಳು ಮೂಡಿಸುವ ಭಯ, ಕೊಡುವ ಯಾತನೆ, ಹಿಂಡುವ ನೆನಪುಗಳು, ಮಣ್ಣಲ್ಲಿ ಮಣ್ಣಾಗುವ, ಅಗ್ನಿಯ ಬಾಯಿಗೆ ಆಹಾರವಾಗುವ ಪ್ರಕ್ರಿಯೆ ಇದೆಯಲ್ಲಾ, ಅದರ ಪಡಿಯಚ್ಚು ನಮ್ಮುಸಿರು ಕೊನೆಯ ಬಾರಿ ಟಾಟಾ ಹೇಳುವ ತನಕ ಎದೆಯಲ್ಲಿ ಉಳಿದುಬಿಡುತ್ತದೆ!!
ಆದರೆ, ' ಸಾವು ' ಎನ್ನುವ ಸುಂದರಿ (ಕುರೂಪಿ ಕೂಡಾ!) ಮೂಡಿಸಿದ ಕಲ್ಪನೆ, ವಾಸ್ತವ, ನಂಬಿಕೆ, ನಿಗೂಢತೆ... ಇವೆಲ್ಲಾ ಮಸ್ತಕದ ಮೂಲೆಯಲ್ಲಿ ಪ್ರತಿಷ್ಠಾಪನೆಗೊಂಡಿದೆ. ಅದು ಬದಲಾಗಬಹುದು, ಅಥವಾ ಇನ್ನಷ್ಟು ಫೆವಿಕಾಲ್ ಅಂಟಿಸಿಕೊಂಡು ಕುಳಿತುಬಿಡಬಹುದೇನೋ!!
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


