ಏನೋ ಮಾಡಲು ಹೋಗಿ…

‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’ ಎಂಬ ಪ್ರಸಿದ್ಧ ಹಾಡು, ಕೇವಲ ಜೀವನದಲ್ಲಿ ನಾವು ತೆಗೆದುಕೊಳ್ಳುವ ತಪ್ಪು ನಿರ್ಧಾರಗಳನ್ನು ಪ್ರತಿನಿಧಿಸುವುದು ಮಾತ್ರವಲ್ಲ, ಕೆಲವೊಮ್ಮೆ ನಗೆಪಾಟಲಿಗೆ ಈಡಾಗುವ ಸಂದರ್ಭಗಳಿಗೂ ಹೊಂದಿಕೊಳ್ಳುತ್ತದೆ. ಮುಖ್ಯವಾಗಿ, ಯಾವುದೋ ಹೊಸ ಖಾದ್ಯ ಮಾಡಲು ಹೋಗಿ ಕೈಸುಟ್ಟುಕೊಂಡಾಗ. 


ಮನುಷ್ಯನಿಗೆ ನಾಲಿಗೆ ಚಪಲ ಹೆಚ್ಚು. ಹಾಗಾಗಿ ಅಡುಗೆಯ ವಿಚಾರದಲ್ಲಿ ಅವನು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಕೆಲವು ಪ್ರಯೋಗಗಳು ಪ್ರಸಿದ್ಧವಾದರೆ, ಇನ್ನು ಕೆಲವು ತಿನ್ನಲು ಯೋಗ್ಯವಾಗಿರುವುದಿಲ್ಲ. ತಾನು ಮಾಡಿದ ಪ್ರಯೋಗಗಳನ್ನೆಲ್ಲಾ ಒಂದೆಡೆ ರಾಶಿ ಹಾಕುವ ಅವಕಾಶವನ್ನು ‘ಯೂಟ್ಯೂಬ್’ ಎಂಬ ವೇದಿಕೆ ಮಾಡಿಕೊಟ್ಟಿದೆ. 


ಇಲ್ಲಿ ನೀವು ತಡಕಾಡಿದರೆ ಸಾಕು, ಬೆರಳು ಹಾಗೂ ಕಣ್ಣುಗಳಿಗೆ ಸಾಕೆನ್ನಿಸುವಷ್ಟು ವಿಡಿಯೋಗಳು ಸಿಗುತ್ತವೆ. ನೀವೆಲ್ಲರೂ ಯೂಟ್ಯೂಬ್ ನೋಡಿ ಒಂದಲ್ಲಾ ಒಂದು ಖಾದ್ಯವನ್ನು ತಯಾರಿಸಿದವರೇ ಆಗಿರುತ್ತೀರಿ. ಅದರಲ್ಲಿ ಪ್ರತಿಯೊಂದು ವಿಡಿಯೋದಲ್ಲಿ ತೋರಿಸಿದ ರೀತಿಯೇ ಆಗುತ್ತದೆ ಎನ್ನುವುದು ಸುಳ್ಳು. ನಮ್ಮ ಮನೆಯಲ್ಲಿ ಆಗಿದ್ದು ಇದುವೇ. ಆ ಅನುಭವವನ್ನು ನೀವೇ ಓದಿ.. 


ಅಂದು ನಮ್ಮೂರಿನಲ್ಲಿ ಜೋರಾದ ಮಳೆ. ಜೊತೆಗೆ ಭಾನುವಾರ ಬೇರೆ. ಬೆಚ್ಚಗೆ ಹೊದ್ದು, ಕಿಟಕಿಯಿಂದ ಮಳೆ ನೋಡುತ್ತಾ ಕುಳಿತಿದ್ದೆ. ನಾನು ಸುಮ್ಮನಿದ್ದರೇನು? ನಾಲಿಗೆ ಸುಮ್ಮನಿರಬೇಕಲ್ಲ.. ಸೀದಾ ಅಮ್ಮನ ಬಳಿ ಹೋಗಿ, ‘ಅಮ್ಮಾ, ಬಿಸಿಬಿಸಿ ಏನಾದರೂ ತಿನ್ನಬೇಕು ಅನ್ನಿಸ್ತಿದೆ’ ಎಂದೆ. ಸರಿ, ಯೂಟ್ಯೂಬ್ ನೋಡಿ ಅಡುಗೆ ತಯಾರಿಸುವುದೆಂದು ನಿರ್ಧಾರವಾಯಿತು. 


ಯೂಟ್ಯೂಬ್ ಒಂದು ಸಾಗರವಿದ್ದಂತೆ. ನಿಮಗೆ ಬೇಕಾದ ಮಾಹಿತಿಯ ಜೊತೆಗೆ ಬೇಡದ್ದನ್ನು ಸಹ ನಿಮ್ಮ ಕಣ್ಮುಂದೆ ಎಸೆಯುತ್ತದೆ. ನಾವು ಈ ಸಾಗರದಲ್ಲಿ ಈಜಾಡಿ, ಹುಡುಕಿ ಕೊನೆಗೂ ‘ಬ್ರೆಡ್ ಸಮೋಸಾ’ ಎನ್ನುವ ಹೊಸದೊಂದು ತಿಂಡಿ ಮಾಡುವುದೆಂದು ತೀರ್ಮಾನಿಸಿಯೂ ಆಯಿತು!  


ಈ ಖಾದ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದು ಆಲೂಗಡ್ಡೆ ಮಿಶ್ರಣ ಮತ್ತು ಬ್ರೆಡ್.  ಅವೆರಡೂ ಮನೆಯಲ್ಲಿದ್ದ ಕಾರಣ ಬ್ರೆಡ್ ಸಮೋಸಾ ಸವಿಯುವುದು ಖಾತ್ರಿಯಾಯ್ತು. ವಿಡಿಯೋದಲ್ಲಿ ಹೇಳಿದಂತೆ ಆಲೂಗಡ್ಡೆ ಬೇಯಿಸಿ, ಮಸಾಲೆ ಸೇರಿಸಿ ಮಿಶ್ರಣ ತಯಾರಿಸಬೇಕು. ಆಮೇಲೆ ಬ್ರೆಡ್ ಅನ್ನು ಲಟ್ಟಿಸಿ, ಅದರೊಳಗೆ ಹೂರಣ ತುಂಬಬೇಕು. ಮಿಶ್ರಣವಂತೂ ಘಮಗುಟ್ಟಿಸುವಷ್ಟು ಚೆನ್ನಾಗಿ ತಯಾರಾಯ್ತು.


ಇನ್ನೇನು ಬ್ರೆಡ್ ಲಟ್ಟಿಸಿ, ಅದಕ್ಕೆ ಹೂರಣ ತುಂಬುವುದಷ್ಟೇ ಬಾಕಿ. ನಾನಂತೂ ಉತ್ಸಾಹದಿಂದ ಲಟ್ಟಣಿಗೆ ಹಿಡಿದು, ಬ್ರೆಡ್ ಲಟ್ಟಿಸಲು ಕುಳಿತೆ. ಲಟ್ಟಿಸಿದ ಮರುಕ್ಷಣವೇ ಬ್ರೆಡ್ ಚೂರುಚೂರಾಗಿ ತುಂಡಾಯಿತು!! 


ವಿಡಿಯೋದಲ್ಲಿ ತೋರಿಸಿದ ಬ್ರೆಡ್ ಅಗಲವಾಗಿ, ದೊಡ್ಡದಾಗಿತ್ತು. ನಾವು ಆಯ್ದುಕೊಂಡಿದ್ದು ಚಿಕ್ಕ ಬ್ರೆಡ್. ಅದು ಲಟ್ಟಣಿಗೆಯ ಒತ್ತಡ ತಡೆಯಲಾರದೆ ನಮ್ಮ ಹೊಸ ಖಾದ್ಯಕ್ಕೆ ಶರಣು ಹೊಡೆಯಿತು.


ಆಲೂಗಡ್ಡೆ ಮಿಶ್ರಣ ಬಿಸಿಬಿಸಿಯಾಗಿ ತಯಾರಾಗಿದೆ. ಆದರೆ ಮುಖ್ಯವಾಗಿ ಬೇಕಾದ ಬ್ರೆಡ್ ಇಲ್ಲ!! ನಾಲಿಗೆ ಬೇರೆ ನನಗಿಂತ ಉತ್ಸಾಹದಲ್ಲಿ ರುಚಿ ಸವಿಯಲು ತಯಾರಾಗಿದೆ. ನೋಡಿದರೆ ನಮ್ಮ ನಳಪಾಕದ ಮುಂದಿನ ಲಕ್ಷಣಗಳು ಗೋಚರವಾಗುತ್ತಿಲ್ಲ.


ಇನ್ನೇನು ಮಾಡುವುದು? ಎಂದು ಯೋಚಿಸುತ್ತಾ ಕುಳಿತಾಗ ಹೊಳೆದದ್ದು ನಮ್ಮ ಜಿಲ್ಲೆಯ ಪ್ರಸಿದ್ಧ ‘ಬಟಾಟೆ ಅಂಬಡೆ’ (ಆಲೂಗಡ್ಡೆ ಬೋಂಡಾ) ಎಂಬ ಆಪತ್ಭಾಂಧವನ ಹೆಸರು. 


ತಕ್ಷಣ ಅಮ್ಮ ಮಿಶ್ರಣವನ್ನು ಚೆನ್ನಾಗಿ ಉಂಡೆ ಕಟ್ಟಿ, ಎಣ್ಣೆಯಲ್ಲಿ ಬಿಟ್ಟಾಗ, ದುಃಖವೆಲ್ಲಾ ಮಾಯವಾಗಿ ಬೋಂಡಾ ರೂಪದಲ್ಲಿ ಖುಷಿಯಾಗಿ ಹೊರಬಂತು.  ‘ಬ್ರೆಡ್ ಸಮೋಸಾ’ ತಯಾರಿಸಿ, ಸವಿಯಲು ಹೋಗಿ ಕೊನೆಗೆ ನಾವು ತಿಂದದ್ದು ‘ಬಟಾಟೆ ಅಂಬಡೆ’.


ಬ್ರೆಡ್ ಸಮೋಸಾ ತಿನ್ನಲಾಗಲಿಲ್ಲ ಎಂದು ಬೇಜಾರಿದ್ದರೂ, ಕೊನೆ ಪಕ್ಷ ಈ ಮಳೆಗೆ ನಾಲಿಗೆಗೆ ರುಚಿಸುವ ತಿಂಡಿ ಸಿಕ್ಕಿತು ಎಂದು ಸಮಾಧಾನಪಟ್ಟುಕೊಂಡೆ. ಆಗ ನೆನಪಾದ ಹಾಡಿದು, ‘ಏನೋ ಮಾಡಲು ಹೋಗಿ ಏನು ಮಾಡಿದೆ ನೀನು’...



ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.



ಪ್ರಚಲಿತ ಪೋಸ್ಟ್‌ಗಳು