ನಾಗ ಪಂಚಮಿಯ ಸಿಹಿ ಖಾದ್ಯ - ಅರಶಿನ ಎಲೆ ಕಡುಬು
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುವ ನಾಗರ ಪಂಚಮಿ ಹಬ್ಬ, ಮುಂದೆ ಸಾಲಾಗಿ ಬರುವ ಹಬ್ಬಗಳಿಗೆ ನಾಂದಿ ಇದ್ದಂತೆ. ನಾಗನನ್ನು ಭಕ್ತಿಯಿಂದ ಪೂಜಿಸುವ ಈ ದಿನ ಹಲವು ವಿಶೇಷ ಖಾದ್ಯಗಳಿಗೂ ಹೆಸರುವಾಸಿ.
ನಾಗರ ಪಂಚಮಿಯ ಹಿನ್ನಲೆ ಹಾಗೂ ಮಹತ್ವ
ನಾಗರ ಪಂಚಮಿ ಹಬ್ಬವು ಸರ್ಪಗಳನ್ನು ಪೂಜಿಸುವ ಹಬ್ಬವಾಗಿದೆ. ಈ ದಿನ ನಾಗದೇವತೆಯನ್ನು ಪೂಜಿಸಿ, ಹುತ್ತಗಳಿಗೆ ಹಾಲು, ಹೂವುಗಳನ್ನು ಅರ್ಪಿಸಲಾಗುತ್ತದೆ. ಸಹೋದರ ಸಹೋದರಿಯರ ಬಾಂಧವ್ಯವನ್ನು ಸಹ ಸಂಕೇತಿಸುತ್ತದೆ.
ಹಬ್ಬದ ಹಿನ್ನಲೆ
ಕೃಷ್ಣನು ಕಾಳಿಂಗ ಸರ್ಪವನ್ನು ಮರ್ದಿಸಿದ ದಿನ ಹಾಗೂ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಿದ ದಿನವು ನಾಗರ ಪಂಚಮಿ ಹಬ್ಬದ ಹಿನ್ನಲೆ. ತನ್ನ ನಾಲ್ಕು ಸಹೋದರರನ್ನು ಸರ್ಪವು ಕಚ್ಚಿ ಸಾಯಿಸಿದಾಗ, ತಂಗಿಯು ನಾಗದೇವನನ್ನು ಬೇಡಿಕೊಳ್ಳುತ್ತಾಳೆ. ಆಗ ಅವಳ ಅಣ್ಣಂದಿರಿಗೆ ಜೀವವು ಮರಳಿ ಬರುತ್ತದೆ. ಹಾಗಾಗಿ ಅಣ್ಣ ತಂಗಿಯರ ಬಾಂಧವ್ಯ ವೃದ್ಧಿಯ ಸಂಕೇತವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಸರ್ಪಗಳ ಕಾಟದಿಂದ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆಯಿದೆ.
ವಿಶೇಷ ಖಾದ್ಯಗಳು
ಹಬ್ಬಗಳೆಂದರೆ ಸಂಭ್ರಮದ ಜೊತೆ ಖಾದ್ಯಗಳೂ ಸೇರುತ್ತವೆ. ಪ್ರತೀ ಹಬ್ಬವೂ ತನ್ನದೇ ಆದ ವಿಶೇಷ ಖಾದ್ಯಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ನಾಗರ ಪಂಚಮಿ ಕೂಡಾ. ಅದರಲ್ಲಿ ಮುಖ್ಯವಾದದ್ದು ಕರಾವಳಿ ಭಾಗದ 'ಅರಶಿನ ಎಲೆ ಕಡುಬು'.
ಅರಶಿನ ಎಲೆ
ಹಬ್ಬಕ್ಕೆ ಇರುವಂತೆ ಖಾದ್ಯಗಳಿಗೂ ಮಹತ್ವವಿದೆ. ಅರಶಿನ ಎಲೆಯು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಇದು ಸುವಾಸನೆಯುಕ್ತ ಎಲೆಯಾಗಿದ್ದು, ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿದೆ.
ಕಡುಬಿನ ವಿಶೇಷತೆ
ಅರಶಿನ ಎಲೆಯನ್ನು ಬಳಸಿ ತಯಾರಿಸಲಾಗುವ ಸಿಹಿ ತಿಂಡಿಯಿದು. ಇದನ್ನು ಅರಶಿನ ಎಲೆ ಗಟ್ಟಿ ಎಂದೂ ಕರೆಯುತ್ತಾರೆ. ತುಳುವಿನಲ್ಲಿ 'ಈರಡ್ಯೆ', ಕೊಂಕಣಿಯಲ್ಲಿ 'ಪತ್ತೋಳಿ' ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : ನಿಸರ್ಗದ ನೈಸರ್ಗಿಕ ಆರಾಧನೆ 'ಚೂಡಿ ಪೂಜೆ'
ಆಷಾಢ ಶ್ರಾವಣ ಮಾಸದಲ್ಲಿ ಮಾತ್ರವೇ ಪ್ರಾಕೃತಿಕವಾಗಿ ದೊರೆಯುವ ಅರಶಿನ ಎಲೆಯಲ್ಲಿ ಮಾಡಿದ ಈ ಸಿಹಿಯೇ ನೈವೇದ್ಯ. ಈ ಸಿಹಿ ತಿಂಡಿಯನ್ನು ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ತಯಾರಿಸುತ್ತಾರೆ.
ಬೇಕಾಗುವ ಸಾಮಗ್ರಿಗಳು
ಅರಶಿನ ಎಲೆ : ೧ ೫ -೨ ೦ (೩ -೫ ಜನರಿಗೆ)
ಅಕ್ಕಿ ಹಿಟ್ಟು - ೧ ಪಾವು ಅಕ್ಕಿ
ಬೆಲ್ಲ - ಅರ್ಧ ಕೆಜಿ
ತೆಂಗಿನಕಾಯಿ - ೧
ಮಾಡುವ ವಿಧಾನ
ಅಕ್ಕಿಯನ್ನು ೩ -೪ ಗಂಟೆ ನೆನೆಸಿ, ನಂತರ ಅದನ್ನು ಒಂದು ಮುಷ್ಟಿಯಷ್ಟು ತೆಂಗಿನಕಾಯಿ ಜೊತೆಗೆ ನುಣ್ಣಗೆ ರುಬ್ಬಬೇಕು. ಆದರೆ ನೀರು ಜಾಸ್ತಿ ಹಾಕಬಾರದು. ತೆಂಗಿನಕಾಯಿ ತುರಿದು, ಬೆಲ್ಲವನ್ನು ಪುಡಿ ಮಾಡಿ ಜೊತೆ ಸೇರಿಸಿ ಚೂರ್ಣವನ್ನು ತಯಾರಿಸಬೇಕು.
ಅರಶಿನ ಎಲೆಯನ್ನು ಹರವಾಗಿ ಹರಡಿ, ಮೊದಲು ಅದರ ಮೇಲೆ ರುಬ್ಬಿದ ಅಕ್ಕಿ ಹಿಟ್ಟನ್ನು ತೆಳುವಾಗಿ ಸವರಬೇಕು. ಅದರ ಮೇಲೆ ಚೂರ್ಣವನ್ನು ಉದ್ದಕ್ಕೆ ಹರಡಬೇಕು.
ಎಲೆಯನ್ನು ಅರ್ಧ ಭಾಗ ಮಡಚಿ ಇಡ್ಲಿ ಪಾತ್ರೆಯಲ್ಲಿ ಅರ್ಧ ಗಂಟೆ ಬೇಯಿಸಬೇಕು. ಅಲ್ಲಿಗೆ ಕಡುಬು ತಯಾರು!
ಇನ್ನಿತರ ವಿಶೇಷ ಖಾದ್ಯಗಳು
ಕಡುಬಿನ ಜೊತೆಗೆ ಖೀರು, ಪತ್ರೋಡೆ, ಕರಿದ ಕಡುಬು ಮುಂತಾದವು ಈ ಹಬ್ಬದಂದು ಮಾಡುವ ವಿಶೇಷ, ರುಚಿಯಾದ ಖಾದ್ಯಗಳು.
ಖಾದ್ಯಗಳ ಮಹತ್ವ
ಹಬ್ಬಗಳಿಗೆ ಹಿನ್ನಲೆ ಇರುವಂತೆ ಖಾದ್ಯಗಳು ತಮ್ಮದೇ ಆದ ಮಹತ್ವ ಹೊಂದಿರುತ್ತವೆ. ಪ್ರತಿಯೊಂದು ಹಬ್ಬಕ್ಕೆ ಇಂಥದ್ದೇ ಅಡಿಗೆ ಮಾಡಿ ತಿನ್ನಬೇಕು ಎನ್ನುವುದು ನಮ್ಮ ಆರೋಗ್ಯದ ರಕ್ಷಣೆಗಾಗಿ, ನಿರ್ದಿಷ್ಟ ಕಾಲದಲ್ಲಿ ಹರಡುವ ಖಾಯಿಲೆಗಳಿದ ರಕ್ಷಣೆ ಪಡೆಯುವುದಕ್ಕಾಗಿ. ಹಾಗಾಗಿ ಕಾಲಕ್ಕೆ ತಕ್ಕಂತೆ ಹಬ್ಬಗಳನ್ನು ಆಚರಿಸಿ, ಅಡಿಗೆಯನ್ನು ಸೇವಿಸಿ ಸಂಭ್ರಮದ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ.
ಇದನ್ನೂ ಓದಿ : ನಿಸರ್ಗದ ನೈಸರ್ಗಿಕ ಆರಾಧನೆ 'ಚೂಡಿ ಪೂಜೆ'
ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.

