ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೩

 ನಮಸ್ತೆ.


   ಮಾತಿನ ನಡುವೆ ನುಡಿಗಟ್ಟು, ಗಾದೆಗಳನ್ನು ಬಳಸುವುದು ಒಂದು ಬಗೆಯ ಕಲೆಯೇ ಸರಿ. ನಿರ್ದಿಷ್ಟ ಸಂದರ್ಭ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಇವುಗಳನ್ನು ಬಳಸುವವರು ಕಲಾವಿದರು!


  ನುಡಿಗಟ್ಟುಗಳ ಬಳಕೆ ತುಸು ಕಡಿಮೆಯಾದರೂ, ಅವುಗಳಲ್ಲೊಂದು ಸೊಗಸಿದೆ. ಆ ಸೊಗಸಿನ ಪರಿಚಯಕ್ಕಾಗಿಯೇ ಆರಂಭಿಸಲಾದ ಸರಣಿಯಿದು.


ಪ್ರತೀ ಸಂಚಿಕೆಯಲ್ಲಿ ಒಂದಿಷ್ಟು ನುಡಿಗಟ್ಟುಗಳನ್ನು ಅವುಗಳ ಅರ್ಥ ಸಹಿತ ನೀಡುವ ಪುಟ್ಟ ಪ್ರಯತ್ನವಿದು. ಅಗತ್ಯವಿದ್ದಲ್ಲಿ ಉದಾಹರಣೆ ಹಾಗೂ ವ್ಯಾಖ್ಯಾನಗಳನ್ನು ನೀಡಲಾಗುವುದು. 


ಇದನ್ನೂ ಓದಿ : ಕನ್ನಡ ನುಡಿಗಟ್ಟು ಸರಣಿ - ಸಂಚಿಕೆ ೨




  ಇವುಗಳನ್ನು ಕನ್ನಡ ಶಬ್ದಕೋಶದಿಂದ ಎರವಲು ಪಡೆಯಲಾಗಿದೆ. ವರ್ಣಮಾಲೆಯ ಕ್ರಮಾನುಸಾರವಾಗಿ ಪ್ರತೀ ಸಂಚಿಕೆಯಲ್ಲಿ ನುಡಿಗಟ್ಟುಗಳನ್ನು ನೀಡಲಾಗುತ್ತದೆ. ನಮ್ಮ ದೈನಂದಿನ ಮಾತುಕತೆಯಲ್ಲಿ, ಬರವಣಿಗೆಯಲ್ಲಿ ಇವುಗಳನ್ನು ಹಾಸುಹೊಕ್ಕಾಗಿಸಲು ಪ್ರಯತ್ನಿಸೋಣ.


                                                                        ಸಂಚಿಕೆ ೩


ಎದೆಯ ಮೇಲೆ ಕೈಯಿಟ್ಟು ಹೇಳು : ಪ್ರಮಾಣ ಮಾಡಿ ಹೇಳು


ಎಮ್ಮೆತಮ್ಮಣ್ಣ : ಮಂದಬುದ್ಧಿಯವ


ಎರಡು ನಾಲಗೆ : ಒಂದೊಂದು ಸಲ ಒಂದೊಂದು ರೀತಿ ಹೇಳುವುದು


ಎರಡುಬಗೆ : ದ್ರೋಹವನ್ನು ಚಿಂತಿಸು, ಭೇದ ಮಾಡು


ಎರಡೆಣಿಸು : ದ್ರೋಹವನ್ನು ಚಿಂತಿಸು, ಭೇದ ಮಾಡು


ಎಲ್ಲರ ಬಾಯಲ್ಲೂ ಇರು : ಪ್ರಸಿದ್ಧವಾಗಿರು


ಎಲೆ ಎಂಜಲು ಮಾಡು : ನೆಪ ಮಾತ್ರಕ್ಕೆ ಊಟ ಮಾಡು


ಎಳ್ಳಷ್ಟು : ಅತ್ಯಲ್ಪ


ಎಳ್ಳುನೀರು ಬಿಡು : ಶಾಶ್ವತವಾಗಿ ಋಣವನ್ನು ಕಡಿದುಕೊಳ್ಳುವುದು, ಕೈಬಿಡು


ಏತಿಯೆಂದರೆ ಪ್ರೇತಿಯೆನ್ನು : ಹೇಳಿದ್ದಕ್ಕೆ ವಿರುದ್ಧವಾಗಿ ಹೇಳು


ಏಳನೆಯ ತಿಂಗಳಲ್ಲಿ ಹುಟ್ಟಿದವ : ಅವಸರಪಡುವವ


ಏಳು ಕೆರೆಯ ನೀರು ಕುಡಿದವ : ಬಹಳ ಅನುಭವಶಾಲಿ


ಒಂಟಿಕಾಲಿನ ಮೇಲೆ ನಿಲ್ಲು : ಬಹಳ ಕುತೂಹಲ/ಕಾತರದಿಂದಿರು


ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ : ಪಕ್ಷಪಾತಮಾಡು


ಒಂದು ಕಾಲು ಒಳಗೆ, ಒಂದು ಕಾಲು ಹೊರಗೆ : ಗಡಿಬಿಡಿಯಲ್ಲಿರು, ಯಾವ ಪಕ್ಷಕ್ಕೂ ಸೇರದಿರು


ಒಗ್ಗರಣೆ ಹಾಕು : ಅತಿಶಯವಾಗಿ ಹೇಳು, ಇಲ್ಲದಿರುವುದನ್ನೂ ಬೆರೆಸಿ ಹೇಳು


ಒಡಕುಬಾಯಿ : ಗುಟ್ಟು ನಿಲ್ಲದ ಬಾಯಿ


ಒಡಕುಹಣೆಯವ : ದುರದೃಷ್ಟವಂತ, ಹತಭಾಗ್ಯ


ಒಣಜಂಬ : ವ್ಯರ್ಥ ಅಹಂಕಾರ


ಒಳಜಗಳ : ನಿಷ್ಫಲ ಹೋರಾಟ


ಒಣ ಪಾಂಡಿತ್ಯ : ರಸಗ್ರಹಣಮಾಡದ ಪಾಂಡಿತ್ಯ


ಒಣಹರಟೆ : ಪೊಳ್ಳುಮಾತುಗಳಿಂದ ಕೂಡಿದ ಹರಟೆ, ಉಪಯೋಗವಿಲ್ಲದ ಹರಟೆ


ಒರೆಗೆ ಹೆಚ್ಚು : ಚೆನ್ನಾಗಿ ಪರೀಕ್ಷಿಸು


ಓಂ ಪ್ರಥಮ : ಮೊತ್ತ ಮೊದಲು


ಓಗೊಡು : ಪ್ರತ್ಯುತ್ತರ ಕೊಡು, ಒಪ್ಪಿಗೆ ಸೂಚಿಸು


ಓನಾಮ : ಪ್ರಾರಂಭದ ಪಾಠ


ಓಬಿರಾಯನ ಕಾಲ : ಬಹಳ ಪ್ರಾಚೀನ ಕಾಲ


(ಇಲ್ಲಿ 'ಓಬಿ' ಪದವನ್ನು 'ಓಲ್ಡ್ ಬ್ರಿಟಿಷ್' ಎಂದು ವ್ಯಾಖ್ಯಾನ ಮಾಡುತ್ತಾರೆ. ಓಬಿರಾಯ ಅಂದರೆ 'ಓಲ್ಡ್ ಬ್ರಿಟಿಷ್ ರಾಯ್') 



ಹೆಚ್ಚಿನ ಲೇಖನಗಳಿಗಾಗಿ ಭಿತ್ತಿ ಬ್ಲಾಗ್ ಓದಿ.


ಪ್ರಚಲಿತ ಪೋಸ್ಟ್‌ಗಳು