ಅವ್ಯವಸ್ಥಿತ ಸೌಂದರ್ಯ 'ಕೆ. ಆರ್. ಮಾರುಕಟ್ಟೆ'
ಮಾರುಕಟ್ಟೆಗಳು ಜನಜೀವನದ ಅವಿಭಾಜ್ಯ ಅಂಗ. ಅದೊಂದು ಅಶುಚಿಯಾಗಿರುವ ಸುಂದರ ಜಾಗ! ತರಹೇವಾರಿ ವಸ್ತುಗಳನ್ನಿಟ್ಟ ದೊಡ್ಡ ತಟ್ಟೆ ಅದು. ನಿಮ್ಮ ಚೌಕಾಶಿ ಕಲಾ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ. ಅಲ್ಲಿ ಖರೀದಿಗೆ ಮಾತ್ರವಲ್ಲ ಸುಮ್ಮನೆ ಅಡ್ಡಾಡಲು ಬರುವವರಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಕೇಳಿ, ಏನನ್ನೂ ತೆಗೆದುಕೊಳ್ಳದೆ ವಾಪಸ್ಸು ಬರುವ ವಿಚಿತ್ರ ಜೀವಿಗಳಿದ್ದಾರೆ. ಪ್ರತಿದಿನವೂ ಬರುವ ನಿಷ್ಠಾವಂತ ಗ್ರಾಹಕರಿದ್ದಾರೆ. ಇವರುಗಳ ನಡುವೆ ಈ ಅದ್ಭುತ ಸ್ಥಳವನ್ನು, ಅದರಲ್ಲಿ ಅಡಗಿರುವ ಮುಗ್ಧ ಸೌಂದರ್ಯ ಸವಿಯಲು ಭೇಟಿ ಕೊಡುವ ನನ್ನಂಥ ಸೌಂದರ್ಯೋಪಾಸಕರು ಇರುತ್ತಾರೆ. ನಮಗೆ ಕಣ್ಣು ಮತ್ತು ಕ್ಯಾಮರಾವೇ ಆಸ್ತಿ.
ಈವರೆಗೆ ಸಾಕಷ್ಟು ಮಾರುಕಟ್ಟೆಗಳಲ್ಲಿ ಅಡ್ಡಾಡಿದ್ದರೂ, ನನ್ನಿಷ್ಟದ ಮಾರುಕಟ್ಟೆ ರಾಜಧಾನಿ ಬೆಂಗಳೂರಿನ ‘ಕೃಷ್ಣರಾಜೇಂದ್ರ ಮಾರುಕಟ್ಟೆ’ ಅಲಿಯಾಸ್ ‘ಕೆ.ಆರ್. ಮಾರ್ಕೆಟ್’.
ಭೂಮಂಡಲದ ಹೆಚ್ಚಿನ ಸಕಲ ತರಕಾರಿ, ಹೂವು, ಹಣ್ಣುಗಳನ್ನು ಯಾರೋ ಈ ಮಾರುಕಟ್ಟೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಲು ಮರೆತು ಚೆಲ್ಲಾಡಿದಂತೆ ಕಾಣುತ್ತದೆ. ಆದರೂ ಅಲ್ಲೊಂದು ಸೌಂದರ್ಯವಿದೆ! ಮೂಗನ್ನು ಮುಚ್ಚುವ ಸಂದರ್ಭಗಳು ಕೆಲವು ಬಂದರೂ, ಕಣ್ಣು ಮಿಟುಕಿಸದೆ ನೋಡುವ ಅಂದ ಚಂದ ಇಲ್ಲಿದೆ. 'ಕಲರ್ ಕಲರ್ ವಿಚ್ ಕಲರ್ ಡೂ ಯೂ ಚೂಸ್?' ಆಟವನ್ನು ಇಲ್ಲಿ ಆರಾಮಾಗಿ ಆಡಬಹುದು. ಬಣ್ಣವನ್ನು ಹುಡುಕಿಕೊಂಡು ಈ ವಿಶಾಲ ಆವರಣದಲ್ಲಿ ಓಡಾಡುವ ತ್ರಾಣ ಆಡುವವರಿಗೆ ಇರಬೇಕಷ್ಟೇ..
ತರಕಾರಿ, ಹಣ್ಣು, ಸೊಪ್ಪು, ಪೂಜಾ ಸಾಮಗ್ರಿಗಳು, ವೀಳ್ಯದೆಲೆ, ಬಾಳೆ ಎಲೆ ಇವುಗಳಿಗೆಂದೇ ಪ್ರತ್ಯೇಕವಾದ ವಿಭಾಗಗಳಿವೆ. ಇವೆಲ್ಲದರ ನಡುವೆ ಎದ್ದು ನಿಲ್ಲುವುದು ಇಲ್ಲಿನ ಹೂವಿನ ಮಾರುಕಟ್ಟೆ! ಆ ನಯನ ಮನೋಹರ ಪುಷ್ಪರಾಶಿಯನ್ನು ಕಣ್ ತುಂಬಿಸಿಕೊಳ್ಳುವುದೇ ಅವರ್ಣನೀಯ ಅನುಭವ!
ಇದನ್ನೂ ಓದಿ : ಮೈಸೂರಿನ ಬೀದಿಗಳಲ್ಲಿ ಏಕಾಂಗಿ ಸಂಚಾರ
ಬಿದಿರಿನ ಬುಟ್ಟಿಗಳಲ್ಲಿ, ಸಣ್ಣ ಅಂಗಡಿಗಳಲ್ಲಿ, ವಿಶಾಲ ಮಳಿಗೆಗಳಲ್ಲಿ, ಎಲ್ಲಿ ನೋಡಿದರಲ್ಲಿ ಸುಮಗಳದ್ದೇ ರಾಜ್ಯಭಾರ. ತಮ್ಮ ಜಾಗಗಳಲ್ಲಿ ಹೂವಿನ ರಾಶಿಯನ್ನು ಹರಡಿಕೊಂಡು ಕುಳಿತಿರುವವರೇ ಇಲ್ಲಿ ರಾಜ್ಯಭಾರ ಮಾಡುವವರು. ಏಕಾಗ್ರತೆಯಿಂದ ಹೂಮಾಲೆ ಕಟ್ಟುವಲ್ಲಿ ನಿರತರಾಗಿರುವವರು ಸಿದ್ಧ ಯೋಗಿಗಳಂತೆ ಕಾಣಿಸುತ್ತಾರೆ. ಅಳೆದು ತೂಗಿ ವ್ಯಾಪಾರ ಮಾಡುವಲ್ಲಿ ಪ್ರತಿಯೊಬ್ಬರೂ ಪರಿಣಿತರು. ಚೌಕಾಶಿ ಮಾಡಲು ಸಹ ತಯಾರು. ಒಟ್ಟಿನಲ್ಲಿ ಇದೊಂದು ಹೂವಿನ ಜಾತ್ರೆ ಇದ್ದಂತೆ!
ಮಳಿಗೆಗಳ ಮೇಲೆ ನಿಂತು ನೋಡಿದರೆ ಬಿಚ್ಚಿಟ್ಟ ಬಣ್ಣದ ಡಬ್ಬಿಯನ್ನು ಕಂಡಂತ್ತಾಗುತ್ತದೆ. ಕೆಳಗಿಳಿದು ಪ್ರತಿಯೊಂದು ಅಂಗಡಿಗಳನ್ನು ನೋಡಬೇಕೆಂಬ ಆಸೆ ನಿಮಗಿದ್ದರೆ, ಇದಕ್ಕಾಗಿ ಕನಿಷ್ಠ ಒಂದು ಗಂಟೆ ಮೀಸಲಿಡಬೇಕು.
ಮಲ್ಲಿಗೆ, ಸೇವಂತಿಗೆ, ಗುಲಾಬಿ, ಕನಕಾಂಬರ ಮೊದಲಾದ ಬಿಡಿ ಹೂವುಗಳ ಜೊತೆಗೆ ಸಣ್ಣ ಹಾಗೂ ಬೃಹತ್ ಹೂಮಾಲೆಗಳೂ ಇವೆ. ನಿತ್ಯವೂ ಘಮಗುಡುವ ವರ್ಣಗಳ ಲೋಕವಿದು!
ಈ ವ್ಯಾಪಾರಿಗಳ ನಡುವೆ ಮಹಾನಗರ ಪಾಲಿಕೆಯವರು ಕಸ ವಿಲೇವಾರಿ ಮಾಡಲು ಓಡಾಡುತ್ತಲೇ ಇರುತ್ತಾರೆ. ಸದಾ ಗಜಿಬಿಜಿಯಿಂದ ಕೂಡಿರುವ ಈ ಜಾಗದಲ್ಲಿ, ನಿಮಗ್ಯಾವುದೂ ಕಿರಿಕಿರಿ ಅನ್ನಿಸುವುದಿಲ್ಲ.
ಇಲ್ಲೊಂದು ಬಗೆಯ ನೆಮ್ಮದಿ ಇದೆ. ಪ್ರಕೃತಿಯ ಅತ್ಯದ್ಭುತ ಸೃಷಿಯಾದ ‘ಹೂವಿನ’ ಪರಪಂಚವಿದು. ಒಮ್ಮೆ ಬಂದು ನೋಡಿ..


